ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಬೆಳಕಿನ ಹಬ್ಬ ದೀಪಾವಳಿಯ ಅಮವಾಸ್ಯೆ ಪೂಜೆಯ ಅಂಗವಾಗಿ ಹೂ, ಹಣ್ಣು, ಕುಂಬಳಕಾಯಿ ಸೇರಿದಂತೆ ಪಟಾಕಿ, ಅಲಂಕಾರಿಕ ವಸ್ತುಗಳ ಮಾರಾಟ ಭರದಿಂದ ಜರುಗಿತು.
ಪಟ್ಟಣದಲ್ಲಿ ದೀಪಾವಳಿ ಅಮವಾಸ್ಯೆಯನ್ನು ಸೋಮವಾರ ಸಾಯಂಕಾಲ ನಂತರ ಹಾಗೂ ಮಂಗಳವಾರ ಎರಡು ದಿನಗಳಂದು ಆಚರಿಸಲಾಗುತ್ತಿದೆ. ವ್ಯಾಪಾರಸ್ಥರು ತಮ್ಮ ಅಂಗಡಿ, ಮಾರಾಟ ಮಳಿಗೆಗೆಳ ಲಕ್ಷ್ಮಿ ಪೂಜೆಗಾಗಿ ಬಾಳೇಗಿಡ, ಕಬ್ಬು, ತೆಂಗಿನ ಪರಕೆ, ಶೃಂಗಾರ ವಸ್ತಗಳ ಸಹಿತ ಖಾತೆಪುಸ್ತಕ, ಹೂಹಣ್ಣುಗಳನ್ನು ಮಂಗಳವಾರ ಬೆಳಿಗ್ಗೆಯೇ ಖರೀದಿಸಿದರು. ಪೂಜೆಗಾಗಿ ಸೋಮವಾರ ಹಾಗೂ ಮಂಗಳವಾರ ರಾತ್ರಿ ಅಂಗಡಿ ಮಳಿಗೆಗಳನ್ನು ಹೂ-ಹಾರ, ವಿದ್ಯುತ್ ದೀಪಗಳೊಂದಿಗೆ ಸಿಂಗರಿಸಿದರು. ಹೊಸ ಬಟ್ಟೆಗಳನ್ನು ಧರಿಸಿ ಮನೆ ಮಂದಿಯೆಲ್ಲಾ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಹಿಳೆಯರು ವಿಶೇಷವಾಗಿ ಮುತೈದಿಯರ ಪೂಜೆಯಲ್ಲಿ ನಿರತರಾಗಿದ್ದರೆ, ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಸಂಜೆ ಆರಂಭಗೊಂಡ ಪೂಜಾ ವಿಧಿವಿಧಾನಗಳು ತಡ ಮಧ್ಯರಾತ್ರಿಯವರೆಗೆ ಜರುಗಿದವು.
ಮಂಗಳವಾರ ಸೂರ್ಯೋದಯದೊಂದಿಗೆ ಅಮವಾಸ್ಯೆ ಆರಂಭಗೊಂಡಿದ್ದು, ಮನೆಗಳಲ್ಲಿ ಲಕ್ಷ್ಮಿ ಪೂಜೆಯ ಅಂಗವಾಗಿ ಹೂ-ಹಾರಗಳನ್ನು ಖರೀದಿಸಲು ಜನ ಬೆಳಿಗ್ಗೆಯೇ ಆಗಮಿಸಿದ್ದರು. ಇದರಿಂದ ಮಾರುಕಟ್ಟೆಯಲ್ಲಿ ಜಾತ್ರೆಯಂತೆ ಜನಸಂದಣಿ ಕಂಡು ಬಂತು. ಚೆಂಡು ಹೂವು, ಶಾವಂತಿಗೆ ಹೂಗಳ ಬೆಲೆ ಕಿಲೋ ಒಂದಕ್ಕೆ ೧೦೦ರಿಂದ ೨೦೦ ರೂ, ಬಾಳೆದಿಂಡು ಜೋಡಿ ಒಂದಕ್ಕೆ ೪೦-೧೦೦ ರೂ, ಐದು ತರದ ಹಣ್ಣುಗಳಿಗೆ ೪೦-೨೫೦ ರೂ, ಕುಂಬಳಕಾಯಿ ೫೦-೧೦೦ ರೂ, ಹೂವಿನ ಹಾರ ೪೦-೧೦೦ರೂ, ಗಳವರೆಗೆ ಮಾರಲ್ಪಟ್ಟವು.
ಅಮವಾಸ್ಯೆ ದಿನ ಮಹಿಳೆಯರು ಸೇರಿದಂತೆ ಮನೆಯವರೆಲ್ಲರೂ ಮನೆ, ಅಂಗಡಿ, ವಾಹನಗಳನ್ನು ಹೂಗಳಿಂದ ತಳಿರು ತೋರಣಗಳನ್ನು ಸಿದ್ಧಪಡಿಸಿ ಸಿಂಗರಿಸಿದರು. ನಂತರ ಶಾಸ್ತೋಕ್ತವಾಗಿ ಲಕ್ಷ್ಮಿ ಪೂಜೆ ಕೈಗೊಂಡು ನಂತರ ಮುತೈದೆಯರಿಗೆ ಹಾಗೂ ಬಾಲ ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಚಿಕ್ಕ ಮಕ್ಕಳು ಹೊಸ ಬಟ್ಟೆಗಳೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.


