ಪಟಾಕಿ ಸಿಡಿಸಿ ಸಂಭ್ರಮಿಸಿದ ಭಕ್ತರು | ಭಕ್ತಿ-ಭಂಡಾರದಲ್ಲಿ ಮಿಂದೆದ್ದ ಭಕ್ತರು
ಉದಯರಶ್ಮಿ ದಿನಪತ್ರಿಕೆ
ಚಡಚಣ: ರೇವತಗಾಂವ ಗ್ರಾಮದಲ್ಲಿ ದೀಪಾವಳಿ ಅಮವಾಸ್ಯೆಯ ನಿಮಿತ್ತ ಗ್ರಾಮದ ಮಲಕಾರಿಸಿದ್ಧ ಹಾಗೂ ಲಗಮವ್ವ ದೇವಿ ದೇವರ ಭೇಟಿ ಕಾರ್ಯಕ್ರಮವು ಶ್ರೀ ರೇವಣಸಿದ್ದೇಶ್ವರ ದೇವಾಸ್ಥಾನದ ಮುಂಭಾಗದಲ್ಲಿ ಭಂಡಾರದೊಂದಿಗೆ ಸೋಮವಾರದಂದು ಅದ್ಧೂರಿಯಾಗಿ ಜರುಗಿತು.
ನಸುಕಿನ ಜಾವ ಮಲಕಾರಿಸಿದ್ದ ಹಾಗೂ ಲಗಮವ್ವದೇವಿ ದೇವರುಗಳಿಗೆ ವಿಶೇಷ ರುದ್ರಾಭಿಷೇಕದೊಂದಿಗೆ ಪೂಜೆ ಜರುಗಿತು. ನಂತರ ಭಕ್ತರಿಂದ ದಿಂಢ ನಮಸ್ಕಾರವು ನಡೆಯಿತು. ಮಧ್ಯಾಹ್ನ ೧ ಗಂಟೆಯಿಂದ ಸ್ಥಳೀಯ ಕಲಾವಿದರಿಂದ ಡೊಳ್ಳಿನ ಪದಗಳು ನೆರವೇರಿದವು. ಸಾಯಂಕಾಲ ೪ ಗಂಟೆಗೆ ಶ್ರೀ ಮಲಕಾರಿಸಿದ್ಧ ಹಾಗೂ ಲಗಮವ್ವದೇವಿ ದೇವರ ಪಲ್ಲಕ್ಕಿಗಳ ಭವ್ಯ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ವೈಭವದೊಂದಿಗೆ ಶ್ರೀ ರೇವಣಸಿದ್ದೇಶ್ವರ ದೇವಾಸ್ಥಾನದ ಮುಂಭಾಗ ನಾನಾ ಕಲಾವಿದರಿಂದ ಡೊಳ್ಳಿನ ವಾಲಗ ಜರುಗಿತು. ನಂತರ ಪಲ್ಲಕ್ಕಿಗಳ ಮೇಲೆ ಭಕ್ತರು ಭಂಡಾರ ತೂರುವದರೊಂದಿಗೆ ಭೇಟಿ ಜರುಗಿತು.
ಈ ಭೇಟಿ ಕಾರ್ಯಕ್ರಮವನ್ನು ನೋಡಲು ಮಹಾರಾಷ್ಟç ಸೇರಿದಂತೆ ಕರ್ನಾಟಕದ ಸಹಸ್ರಾರು ಭಕ್ತರು ಸೇರಿದ್ದರು. ಭಕ್ತವೃಂದ ದೇವರ ಪಲ್ಲಕ್ಕಿಗಳ ಮೇಲೆ ಹೂ, ಭಂಡಾರ, ಚುರುಮುರಿ, ಶೇಂಗಾ, ಖಾರೀಕ್, ಬದಾಮಿ ಹಾರಿಸಿ ತಮ್ಮ ಹರಕೆಗಳನ್ನು ತೀರಿಸಿದರು. ನಂತರ ಮಲಕಾರಿಸಿದ್ಧ ದೇವಾಸ್ಥಾನದ ಮುಂಭಾಗ ಅಮಸಿದ್ಧ ಪೂಜಾರಿಯವರಿಂದ ನುಡಿಮುತ್ತುಗಳು ಜರುಗಿದವು.

