ಹುಲಜಂತಿಯ ಮಾಳಿಂಗರಾಯನ ಮೇಲೆ ಸಾಕ್ಷಾತ್ ಶಿವ-ಪಾರ್ವತಿಯರು ಮುಂಡಾಸ್
ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ ಮಾಳಿ
ಚಡಚಣ: ಹಾಲುಮತ ಸಮಾಜದ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಸಮೀಪದ ಹುಲಜಂತಿ ಗ್ರಾಮದ ಶ್ರೀ ಮಾಳಿಂಗರಾಯ ಜಾತ್ರೆಯ ಮುಂಡಾಸ್ ಹಾಗೂ ದೇವರುಗಳ ಪಲ್ಲಕ್ಕಿಗಳ ಭೇಟಿಯನ್ನು ನೋಡಲು ಭಕ್ತರ ಮಹಾಪೂರವೇ ಹರಿದು ಬಂದಿದೆ.
ರಾಜ್ಯದ ಗಡಿಯಲ್ಲಿರುವ ಮಂಗಳವೇಡಾ ತಾಲೂಕಿನ ಹುಲಜಂತಿ ಗ್ರಾಮದಲ್ಲಿ ಮಾಳಿಂಗರಾಯನು ೧೪ನೇ ಶತಮಾನದಲ್ಲಿ ಬಾಳಿ ಬದುಕಿ, ಹಲವು ಪವಾಡಗಳನ್ನು ಮಾಡಿದ ಪವಾಡ ಪುರುಷ ಮಾಳಿಂಗರಾಯ. ಮಾಳಿಂಗರಾಯನ ಭಕ್ತಿಗೆ ಮೆಚ್ಚಿದ ಪರಶಿವನು ದೀಪಾವಳಿಯ ಅಮವಾಸ್ಯೆಯ ದಿನ ಬೀಜಗುಂತಿಯ ಹುತ್ತದ ಮೇಲೆ ಹತ್ತಿ ಬೀಜವನ್ನು ನಾಟಿ ಮಾಡಿ. ಅದು ಬೆಳದು ಹೂವಾಗಿ, ಕಾಯಾಗಿ, ಹತ್ತಿಯಾಗಿ ಒಡೆದು. ಆ ಹತ್ತಿಯನ್ನು ನೇಯ್ದು. ಮುಂಡಾಸವನ್ನು ತಯಾರು ಮಾಡಿ ಸಾಕ್ಷಾತ್ ಶಿವ-ಪಾರ್ವತಿಯರು ಕೈಲಾಸದಿಂದ ಧರೆಗಿಳಿದು ಬಂದು ಮುಂಡಾಸು ಸುತ್ತುತ್ತಾನೆ ಎಂಬುದು ಭಕ್ತರ ನಂಬಿಕೆ.
ಸೋಮವಾರದ ಮಧ್ಯರಾತ್ರಿ ದೀಪಾವಳಿ ಅಮವಾಸ್ಯೆಯ ನಿಮಿತ್ತ ಮಾಳಿಂಗರಾಯನ ಮುಂಡಾಸ್‌ನ್ನು ನೋಡಲು ಜನಸಾಗರ ಮಧ್ಯರಾತ್ರಿಯಲ್ಲಿಯೇ ದೇವಾಸ್ಥಾನದ ಸುತ್ತಮುತ್ತ ಊಳಿದುಕೊಂಡಿದ್ದರು. ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬ ಭಕ್ತರು ಭಂಡಾರವನ್ನು ದೇವಾಲಯದ ಮೇಲೆ ಎಸೆಯುವುದು ಇಲ್ಲಿನ ಸಂಪ್ರದಾಯ. ಭಂಡಾರದಲ್ಲಿ ಮಿಂದೆದ್ದ ಭಕ್ತರು ತಮ್ಮ ಜೀವನ ಪಾವನವಾಯಿತು ಎಂಬುದು ಭಕ್ತರ ನಂಬಿಕೆ.
ಈ ಮುಂಡಾಸು ನೋಡಲು ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಗೋವಾ ಹಾಗೂ ಉತ್ತರ ಕರ್ನಾಟಕದ ಲಕ್ಷಾಂತರ ಭಕ್ತ ಸಮೂಹ ಪಾಲ್ಗೋಂಡಿದೆ. ಈ ಮುಂಡಾಸ್ ನೋಡಲು ಸುಮಾರು ೭ ಲಕ್ಷಕ್ಕೂ ಅಧಿಕ ಆಗಮಿಸಿದ ಭಕ್ತರು, ಈ ಮುಂಡಾಸ್ ಯಾವ ದಿಕ್ಕಿನೆಡೆಗೆ ವಾಲಿರುತ್ತದೆ ಎಂಬುದರ ಮೇಲೆ ಮುಂಬರುವ ರಾಜಕೀಯ, ಸಾಮಾಜಿಕ ಹಾಗೂ ಮಳೆ-ಬೆಳೆಯನ್ನು ವಿಶ್ಲೇಷಿಸುವುದು ಇಲ್ಲಿನ ವಿಶೇಷ.
ದೇವರುಗಳ ಭೇಟಿ: ದೇವಾಲಯದ ಎದುರಿನ ಹಳ್ಳದ ಮೈದಾನದಲ್ಲಿ ಮಂಗಳವಾರದಂದು ಸಾಯಂಕಾಲ ೩ ಗಂಟೆಗೆ ಮಾಳಿಂಗರಾಯನ ಭೇಟಿ ಕಾರ್ಯಕ್ರಮದಲ್ಲಿ ಶಿರಾಡೋಣದ ಬೀರಲಿಂಗೇಶ್ವರ, ಏಣಕಿ ಜಕರಾಯ, ಹುನ್ನೂರು ಬೀರಲಿಂಗೇಶ್ವರ ದೇವರುಗಳ ಪಲ್ಲಕ್ಕಿಗಳು ಸೇರಿದಂತೆ ೩೦ಕ್ಕೂ ಹೆಚ್ಚು ದೇವರುಗಳ ಪಲ್ಲಕ್ಕಿಗಳು ಸೇರಿದಂತೆ ಕಂಟಲು ಎತ್ತುಗಳು ದೇವಾಲಯದ ಎದುರಿನ ಹಳ್ಳದ ಮೈದಾನದಲ್ಲಿ ಭಾಗಿಯಾಗುತ್ತವೆ. ಮಾಳಿಂಗರಾಯನ ಭೇಟಿಯ ವೇಳೆಯಲ್ಲಿ ಭಕ್ತರು ಭಂಡಾರ, ಖಾರಿಕ್, ಬದಾಮಿ ಹಾಗೂ ಉಣ್ಣೇ ಉತ್ತತ್ತಿಯನ್ನು ಹಾರಿಸುವ ಮೂಲಕ ಭಕ್ತರು ತಮ್ಮ ಹರಿಕೆಗಳನ್ನು ತೀರಿಸುವುದು ವಾಡಿಕೆ. ಈ ವೇಳೆಯಲ್ಲಿ ಭಕ್ತರು ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹವು ಹಳದಿಮಯವಾಗಿರುವುದು ಕಂಡುಬಂತು.

