ಲೇಖನ
ಡಾ.ಜಯವೀರ ಎ.ಕೆ
ಖೇಮಲಾಪುರ ( ರಾಯಬಾಗ )
ಉದಯರಶ್ಮಿ ದಿನಪತ್ರಿಕೆ
“ಸಾಹಿತ್ಯ ಕ್ಷೇತ್ರದಲ್ಲಿ ದಲಿತ ಸಾಹಿತಿ ಎಂಬ ಕ್ರೆಡಿಟ್ ಅಗತ್ಯವಿಲ್ಲ” ಕವಿ ಡಾ. ಎಲ್ ಹನುಮಂತಯ್ಯ ಅವರು ಬೆಂಗಳೂರಿನಲ್ಲಿ ಇತ್ತೀಚಿಗೆ ಪುಸ್ತಕಗಳ ಜನಾರ್ಪಣೆ ಕಾರ್ಯಕ್ರಮದಲ್ಲಿ ಸಮಕಾಲಿನ ಸಂದರ್ಭದಲ್ಲಿ ವ್ಯಕ್ತಗೊಳಿಸಿದ ಈ ಪ್ರಬುದ್ಧ ಹೇಳಿಕೆ ಸ್ವಾಗತಾರ್ಹವಾದುದು. ಕನ್ನಡ ಸಾಹಿತ್ಯ ಲೋಕದಲ್ಲಿ ದಲಿತ ಕವಿ, ಬಲಿತ ಕವಿ, ಎಂಬ ಬೇಧ ಭಾವ ನಮ್ಮಿಂದ ಪೂರ್ಣ ತೊಲಗಬೇಕಾಗಿದೆ ಎಂಬ ಚಿಂತನೆಗೆ ಇವರ ಮನೋಜ್ಞ ಹೇಳಿಕೆ ನಿಜಕ್ಕೂ ಪುಷ್ಟಿ ನೀಡುತ್ತದೆ. ಕವಿ ಅಥವಾ ಸಾಹಿತಿಯ ಮಾನಸ ಗರ್ಭದಿಂದ ಅವಿರ್ಭವಿಸುವ ಮಹೋನ್ನತ ಜಾತ್ಯತೀತ ಭಾವಗಳು ಅಕ್ಷರ ರೂಪ ಪಡೆದು ಅಪೂರ್ವ ಸಾಹಿತ್ಯ ಸೃಷ್ಟಿಯಾಗುತ್ತದೆ. ಪರಿವರ್ತನೆಯ ಈ ಕಾಲ ಘಟ್ಟದಲ್ಲಿ ಸಾಹಿತಿಗಳನ್ನು ಬಲಿತ ಕವಿ, ದಲಿತ ಕವಿ ಎಂದು ಕ್ರೆಡಿಟ್ ಕೊಡಬಾರದು,ಸಾಹಿತ್ಯ ಕ್ಷೇತ್ರದಲ್ಲಿ ದಲಿತ ಎಂದು ಗುರುತಿಸಿಕೊಳ್ಳುವ ಹೆಮ್ಮೆ ಆಗಬಾರದು ಎಂಬ ಪ್ರಸ್ತುತ ಇವರ ಈ ಸೂಚ್ಯ ಹೇಳಿಕೆ ನಮ್ಮೆಲ್ಲರನ್ನು ಸುದೀರ್ಘವಾಗಿ ಚಿಂತನೆಗೆ ಪ್ರೇರೇಪಿಸುತ್ತದೆ. ಸದ್ಯ ನಿತ್ಯ ನಿರಂತರ ಅನುಗಾಲವೂ ಅಕ್ಷರ ಲೋಕ ಸಿರಿವಂತಗೊಳಿಸುವ ಕೈಂಕರ್ಯದಲ್ಲಿ ತೊಡಗಿರುವ ನಾಡಿನ ಈ ಕವಿ, ಸಾಹಿತಿಗಳು ಮನುಷ್ಯ ನಿರ್ಮಿತ ಈ ಜಾತಿಯ ಕಪಿ ಮುಷ್ಠಿಯಿಂದ ಹೊರಬಂದು ಪ್ರಾಜ್ಞರನ್ನು ಮೊದಲು ಮಾಡಿಕೊಂಡು ಎಲ್ಲ ವಾಚಕರು ಪ್ರಗತಿಪರ ಹಾಗೂ ವೈಚಾರಿಕತೆಯನ್ನು ಚೆನ್ನಾಗಿ ಮೈಗೂಡಿಸಿಕೊಂಡು ಪ್ರಮುಖವಾಗಿ ಸಮಷ್ಠಿ ಚಿಂತನೆಯನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯತೆಯ ಬಗ್ಗೆ ಕವಿ ಡಾ. ಹನುಮಂತಯ್ಯ ಅವರ ಪ್ರಗತಿಪರ ಚಿಂತನೆಯಿಂದ ಹೊಮ್ಮಿದ ಈ ಹೇಳಿಕೆ ಮಾರ್ಮಿಕವಾಗಿದೆ, ಚಿಂತನಾರ್ಹವಾಗಿದೆ.


