ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇಶಭಕ್ತಿ, ದೇಶಸೇವೆಯನ್ನೇ ಉಸಿರಾಗಿಸಿಕೊಂಡು ನೂರು ವಸಂತಗಳ ಸಂಭ್ರಮದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಬೇಜವಾಬ್ದಾರಿತನದಿಂದ ಹೇಳಿಕೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ದೊಡ್ಡ ಪಾಪ ಮಾಡಿದ್ದಾರೆ, ಅವರ ಸ್ವಪಕ್ಷದಲ್ಲಿಯೇ ಬೆಂಬಲ ಇಲ್ಲದೇ ಒಂಟಿಯಾಗುವಂತಾಗಿದೆ, ಇನ್ನಾದರೂ ಸಂಘ ಪರಿವಾರದ ಶ್ರೇಷ್ಠತೆಯ ಬಗ್ಗೆ ಅರಿವು ಹೊಂದಿ ಸಂಘ ಪರಿವಾರದ ಬಗ್ಗೆ ಅಗೌರವ ತೋರಿದ ಪಾಪಕ್ಕೆ ಪ್ರಾಯಶ್ಚಿತ್ತ ಪಟ್ಟು ಸಂಘ ಪರಿವಾರಕ್ಕೆ ಅಗೌರವ ತೋರಿದ ಬಗ್ಗೆ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಘ ಪರಿವಾರ ದೇಶಭಕ್ತಿಯ ಇನ್ನೊಂದು ಹೆಸರು, ಸಂಘ ಪರಿವಾರದ ಸ್ವಯಂ ಸೇವಕರು ಈ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸುವ ನಿಸ್ವಾರ್ಥಿಗಳು, ಅಷ್ಟೇ ಏಕೆ ಅಂದಿನ ಪ್ರಧಾನಿ ದಿ.ಜವಾಹರಲಾಲ್ ನೆಹರೂ ಅವರು ಸಂಘ ಪರಿವಾರದ ಕಾರ್ಯದಕ್ಷತೆ, ಸೇವಾ ಮನೋಭಾವವನ್ನು ಶ್ಲಾಘಿಸಿದ್ದನ್ನು ಸಚಿವ ಪ್ರಿಯಾಂಕ್ ಖರ್ಗೆ ಮರೆತಂತೆ ಕಾಣುತ್ತಿದೆ, ದೇಶದ ಸಂಸ್ಕೃತಿ, ಸಂಸ್ಕಾರ ಪ್ರಸಾರ ಕಾರ್ಯದ ಜೊತೆಗೆ ಪ್ರವಾಹ, ಭೂಕಂಪ, ಮಾರುತ ಹೀಗೆ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಸ್ವಯಂ ಸೇವಕರು ಜನರ ನೆರವಿಗೆ ಧಾವಿಸುತ್ತಾರೆ, ಒಂದೇ ಒಂದು ದೇಶ ವಿರೋಧಿ ಚಟುವಟಿಕೆಗಳಲ್ಲಿ ಸಂಘ ಪರಿವಾರ ತೊಡಗಿಸಿಕೊಂಡಿಲ್ಲ, ದೇಶಭಕ್ತಿಯೇ ಜೀವಾಳವಾಗಿಸಿಕೊಂಡಿರುವ ಸಂಘ ಪರಿವಾರಕ್ಕೆ ಅಗೌರವ ತೋರುವ ಮಾತು ಆಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಪಕ್ಷದಲ್ಲಿಯೇ ಬೆಂಬಲ ಇಲ್ಲ, ಅವರ ಹೇಳಿಕೆಯನ್ನೂ ಯಾರೂ ಸಮರ್ಥಿಸಿಕೊಂಡಿಲ್ಲ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಜಕೀಯ ಪಕ್ಷವಲ್ಲ, ರಾಜಕೀಯ ಸಂಘಟನೆಯಲ್ಲ, ಇದನ್ನು ಸುಪ್ರೀಂಕೋರ್ಟ್ ಸಹ ಹೇಳಿದೆ, ಆದರೆ ರಾಜ್ಯ ಸರ್ಕಾರ ಸಂಘ ಪರಿವಾರ ಪಥ ಸಂಚಲನದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಅಮಾನತ್ತು ಮಾಡುತ್ತಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ, ಒಳ್ಳೆಯ ಉದ್ದೇಶವುಳ್ಳ ಚಟುವಟಿಕೆಗಳಲ್ಲಿಯೂ ಸರ್ಕಾರಿ ನೌಕರರು ಭಾಗವಹಿಸಬಾರದೇ? ಈ ರೀತಿ ನೌಕರರ ಮೇಲೆಯೂ ದಬ್ಬಾಳಿಕೆ ನಡೆಸುವ ಈ ತುಘಲಕ್ ಸರ್ಕಾರವನ್ನೂ ಮೀರಿಸಿದೆ, ಈ ರೀತಿಯ ಕೆಟ್ಟ ಆಳ್ವಿಕೆಯ ಸರ್ಕಾರವನ್ನು ನಾನು ಜೀವಮಾನದಲ್ಲಿಯೇ ನೋಡಿಲ್ಲ.
ಮುಗ್ದ ಸರ್ಕಾರಿ ನೌಕರರ ಮೇಲೆ ದಬ್ಬಾಳಿಕೆ ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರ ಮೊದಲು ಸಂಘ ಪರಿವಾರದ ಬಗ್ಗೆ ಅಗೌರವ ತೋರಿದ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಎಂದು ಜಿಗಜಿಣಗಿ ಒತ್ತಾಯಿಸಿದ್ದಾರೆ.
ಒಂದು ಸಮುದಾಯವನ್ನು ಖುಷಿಪಡಿಸುವಗೋಸ್ಕರ ಸಂಘ ಪರಿವಾರವನ್ನು ಟೀಕೆ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ಈಗ ಒಬ್ಬಂಟಿಯಾಗಿದೆ, ಇನ್ನಾದರೂ ಅವರು ತಮ್ಮ ತಪ್ಪಿನ ಬಗ್ಗೆ ಅರಿತುಕೊಳ್ಳಬೇಕು, ಸಂಘ ಪರಿವಾರದ ಶ್ರೇಷ್ಠ ವಿಚಾರಧಾರೆ, ಕೊಡುಗೆಗಳನ್ನು ಅರಿಯಬೇಕು, ಕೂಡಲೇ ಸಮಸ್ತ ಜನರಿಗೆ ಸಂಘ ಪರಿವಾರಕ್ಕೆ ಅಗೌರವ ತೋರಿದ ತಮ್ಮ ನಡವಳಿಕೆಯ ಬಗ್ಗೆ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

