ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಾರ್ವಜನಿಕರು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಸಮರ್ಪಕವಾಗಿ ಮಾಹಿತಿ ನೀಡಿ ಗಣತಿದಾರರಿಗೆ ಸಹಕರಿಸಬೇಕು ಎಂದು ಗ್ರಾಪಂ ಕಾರ್ಯದರ್ಶಿ ಮಾದೇವ ಪೂಜಾರಿಯವರು ಹೇಳಿದರು.
ಶನಿವಾರದಂದು ರೇವತಗಾಂವ ಗ್ರಾಪಂ ಸಿಬ್ಬಂದಿಗಳ ಜೊತೆ ಗ್ರಾಮದ ಸಾರ್ವಜನಿಕ ಸ್ಥಳಗಳು, ಮನೆಮನೆಗಳಿಗೆ ತೆರಳಿ ಸಮೀಕ್ಷಾ ಕಾರ್ಯವನ್ನು ಪರಶೀಲನೆ ನಡೆಸಿದರು.
ಈ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಕುಟುಂಬ ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕು. ನಿಮಗೆ ತಿಳಿದಿರುವಂತೆ ಯಾರಾದರೂ ಗಣತಿಯಿಂದ ಹೊರಗುಳಿದಿದ್ದರೆ ಮಾಹಿತಿ ನೀಡಿ, ಕೆಲವೇ ದಿನಗಳ ಹಿಂದೆ ಜನಿಸಿದ ಮಗುವಾಗಲೀ, ಆಧಾರ ಕಾರ್ಡ್ ಇಲ್ಲದೆ ಇರುವ ಮಗುವು ಕೂಡಾ ಗಣತಿ ಕಾರ್ಯದಿಂದ ಹೊರಗೆ ಉಳಿಯಬಾರದು ಎಂದು ಸಾರ್ವಜನಿಕರಲ್ಲಿ ವಿನಂತಿಸದಿಕೊಂಡರು.
ಈ ವೇಳೆ ಸಮೀಕ್ಷಾ ಕಾರ್ಯದಲ್ಲಿ ತೊಡಗಿದ್ದ ಶಿಕ್ಷಕರಿಗೆ ಸಮೀಕ್ಷಾದಾರರ ಮನೆ, ವಿಳಾಸ ಗೊತ್ತಿಲ್ಲದಿದ್ದರೆ ಅವರ ಮನೆಗಳಿಗೆ ತೆರಳಿ ಸಮೀಕ್ಷಾ ಕಾರ್ಯ ಸುಗಮವಾಗುವಂತೆ ಗ್ರಾಮ ಪಂಚಾಯತ ಸಿಬ್ಬಂದಿಗಳು ಸಹಕರಿಸಿದ್ದಾರೆ.
ಈ ವೇಳೆಯಲ್ಲಿ ಗ್ರಾಮೀಣ ಪುರ್ನವಸತಿ ಕಾರ್ಯಕರ್ತ ಎಸ್.ಎಂ.ಮಾಳಿ, ಗ್ರಾಪಂ ಸಿಬ್ಬಂದಿ ಲಾಯಪ್ಪ ಲೋಣಿ, ಗ್ರಾಮಸ್ಥರಾದ ಶಿವಾನಂದ ಪೂಜಾರಿ, ಭೋಜಪ್ಪ ಹಕ್ಕೆ, ಅಮೋಘಸಿದ್ದ ಪೂಜಾರಿ, ಬೀರಪ್ಪ ಹಿರೇಕುರುಬರ ಸೇರಿದಂತೆ ಇತರರು ಉಪಸ್ಥಿತರಿದ್ದರು.

