ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಾಷ್ಟ್ರೀಯ ಸ್ವಯಂ ಸಂಘದ ಶತಮಾನೋತ್ಸವದ ಅಂಗವಾಗಿ ಸಿಂದಗಿ ನಗರದಲ್ಲಿ ಗಣವೇಷಧಾರಿಗಳಿಂದ ಪಥ ಸಂಚಲನ ಅದ್ದೂರಿಯಾಗಿ ಜರುಗಿತು.
ಆರ್‌ಎಸ್‌ಎಸ್ ಪ್ರಾರ್ಥನಾ ಗೀತೆಯೊಂದಿಗೆ ಪಟ್ಟಣದ ಸಾರಂಗಮಠದಿಂದ ಗಣವೇಷಧಾರಿಗಳ ಪಥ ಸಂಚಲನ ಅತ್ಯಂತ ಅದ್ದೂರಿಯಾಗಿ. ಪ್ರಾರಂಭಗೊಂಡಿತು.
ಮಾಜಿ ವಿಪ ಸದಸ್ಯ ಅರುಣ ಶಹಾಪುರ, ರಮೇಶ ಭೂಸನೂರ, ಮುತ್ತು ಶಾಬಾದಿ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಶಂಭುಲಿಂಗ ಕಕ್ಕಳಮೇಲಿ, ಸಂತೋಷ ಪಾಟೀಲ ಡಂಬಳ, ಅಶೋಕ ಅಲ್ಲಾಪುರ, ಪ್ರದೀಪ ದೇಶಪಾಂಡೆ, ಶೇಖರ ಪಾಟೀಲ, ಡಾ.ಗಿರೀಶ ಕುಲಕರ್ಣಿ, ಡಾ.ಸಿದ್ರಾಮ ಚಿಂಚೊಳ್ಳಿ ಸೇರಿದಂತೆ ಅನೇಕ ಗಣ್ಯರು ಗಣವೇಷಧಾರಿ ಧರಿಸಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.
ಸಾರಂಗ ಮಠದಿಂದ ಪ್ರಾರಂಭಗೊಂಡು ಕನಕದಾಸ ವೃತ್ತ, ಹೆಗ್ಗೆರೇಶ್ವರ ದೇವಸ್ಥಾನ, ವಿ.ಎಮ್.ಕುಲಕರ್ಣಿ ಅಂಗಡಿ, ಹಳೆ ಬಜಾರ್, ನೀಲಗಂಗಾ ದೇವಸ್ಥಾನ, ವಿವೇಕಾನಂದ ವೃತ್ತ, ತೋಂಟದ ಸಿದ್ದಲಿಂಗ ಶ್ರೀಗಳ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ರೇ.ಚ.ರೇವಡಿಗಾರ ರಸ್ತೆಯ ಮಾರ್ಗ, ಅಂಬಿಗರ ಚೌಡಯ್ಯ ವೃತ್ತ, ಸಂಗೋಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತದಿಂದ ಡಾ.ಎಂ.ಎಂ.ಕಲಬುರ್ಗಿ ರಸ್ತೆ ಮಾರ್ಗವಾಗಿ ಸಂಚರಿಸಿ ಆರ್.ಡಿ.ಪಾಟೀಲ ಕಾಲೇಜಿನ ಮೈದಾನಕ್ಕೆ ಪಥ ಸಂಚಲನ ಆಗಮಿಸಿ ಸಮಾಪ್ತಿಗೊಂಡಿತು.
ಹೂವಿನ ಸುರಿಮಳೆ: ಗಣವೇಷಧಾರಿಗಳ ಪಥ ಸಂಚಲನಕ್ಕೂ ಮುನ್ನ ಎಲ್ಲರ ಮನೆ ಮುಂದೆ ನೀರು ಚಿಮುಕಿಸಿ ರಂಗೋಲಿ ಬಿಡಿಸಲಾಗಿತ್ತು. ಪಥ ಸಂಚಲನ ಬರುತ್ತಿದ್ದಂತೆ ಸಾರ್ವಜನಿಕರು ಪುಷ್ಪವೃಷ್ಟಿ ಮಾಡುವ ಮೂಲಕ ಹಿಂದುತ್ವ ಮೆರೆದರು. ಪಥ ಸಂಚಲನದುದ್ದಕ್ಕೂ ಭಾರತ ಮಾತಾಕೀ ಜೈ ಎಂಬ ಘೋಷಣೆ ಮುಗಿಲು ಮುಟ್ಟಿತ್ತು.
ಪಥ ಸಂಚಲನ ಜರುಗುವ ಹಿನ್ನೆಲೆಯಲ್ಲಿ ಇಡೀ ಪಟ್ಟಣದ ತುಂಬ ಕೇಸರಿ ಬಂಟಿಂಗ್ಸ್ ಮತ್ತು ಬಟ್ಟೆಯನ್ನು ವಿವಿಧ ವೃತ್ತಗಳ ಸುತ್ತಲೂ ಕಟ್ಟಲಾಗಿತ್ತು. ಅದರೊಂದಿಗೆ ಬ್ಯಾನರ್ ಅಳವಡಿಸಲಾಗಿತ್ತು. ಇಡೀ ಸಿಂದಗಿ ನಗರ ಕೇಸರಿಮಯವಾಗಿತ್ತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಶನಿವಾರ ಆರ್‌ಎಸ್‌ಎಸ್ ಸಂಘ ಶತಾಬ್ಧಿ ನಿಮಿತ್ಯ ಸಿಂದಗಿಯಲ್ಲಿ ಹಮ್ಮಿಕೊಂಡ ಪಥ ಸಂಚಲನದ ಬಳಿಕ ನಡೆದ ಸ್ವಯಂ ಸೇವಕರ ಸಭೆ ಉದ್ಧೇಶಿಸಿ ಪ್ರಾಂತ ಸಹ ಬೌದ್ಧಿಕ ಪ್ರಮುಖ ರಾಮಚಂದ್ರ ಎಡಕೆ ಮಾತನಾಡಿ, ಭಾರತ ವಿವಿಧತೆಯಲ್ಲಿ ಏಕತೆ ಹೊಂದಿದ ಸುಸಂಸ್ಕೃತ ಮತ್ತು ಮೌಲ್ಯಾಧಾರಿತ ದೇಶ. ಈ ಪುಣ್ಯ, ಪವಿತ್ರ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬ ಭಾರತೀಯನೂ ದೇಶಾಭಿಮಾನಿಯಾಗಿರಬೇಕು. ಈ ನಿಟ್ಟಿನಲ್ಲಿ ರಾಷ್ಟ್ರಕ್ಕಾಗಿ ಸರ್ವತ್ಯಾಗ ಸಮರ್ಪಣಾ ಮನೋಭಾವ ಜಾಗೃತಗೊಳಿಸುವ ಕಾರ್ಯವನ್ನು ಆರ್‌ಎಸ್‌ಎಸ್ ಮಾಡುತ್ತಿದೆ. ರಾಷ್ಟ್ರದ ಹಿತವನ್ನು ಕಾಪಾಡುವಲ್ಲಿ ಆರ್‌ಎಸ್‌ಎಸ್ ಮುಂಚುಣಿಯಲ್ಲಿದೆ. ರಾಷ್ಟçದಲ್ಲಿ ಅನೇಕ ವಿವಿಧ ವಿಕೋಪಗಳು ಬಂದಾಗ ಆರ್.ಎಸ್.ಎಸ್ ಸ್ವಯಫ ಪ್ರೇರಿತವಾಗಿ ಟೊಂಕ ಕಟ್ಟಿ ಕಾರ್ಯನಿರ್ವಹಿಸಿದೆ. ಕೆಲವರು ಸಂಘವನ್ನು ಬಹಿಸ್ಕರಿಸುವ ಮತ್ತು ಸಂಘದ ಚಟುವಟಿಕೆಗಳ ಮೇಲೆ ನಿರ್ಭಂದಗಳನ್ನು ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಯಾವ ಪುರುಷಾರ್ಥಕ್ಕಾಗಿ. ಸಂಘದ ಸರ್ವ ಚಟುವಟಿಕೆಗಳು ಭಾರತವನ್ನು ಜಗತ್ತಿಗೆ ಜಗದ್ಗುರುವನ್ನಾಗಿ ಮಾಡುವ ಮತ್ತು ಭಾರತದಲ್ಲಿ ಉತ್ತಮ ಸಂಸ್ಕಾರ, ಶಿಸ್ತು ನೀಡುವ ಕಾರ್ಯ ಮಾಡುತ್ತಿದೆ. ಇದರಿಂದ ಪ್ರತಿಯೊಬ್ಬ ವ್ಯಕ್ತಿಯ ಏಳಿಗೆ ಆಗುತ್ತದೆ ಇದು ಆರ್‌ಎಸ್‌ಎಸ್ ಸಂಕಲ್ಪ. ಯಾರೋ ಹೇಳಿದ ಮಾತ್ರಕ್ಕೆ ಸಂಗದ ಚಟುವಟಿಕೆಗಳು ನಿಲ್ಲುವುದಿಲ್ಲ. ಸಂಘದ ಕಾರ್ಯ ನಿತ್ಯ ನಿರಂತರವಾಗಿ ಭಾರತಾಂಬೆಯ ಸೇವೆಗೆ ಸಿದ್ದಾವಾಗಿದೆ ಎಂದರು.
ಹಿಂದೂ ರಾಷ್ಟçದ ಪರಿಕಲ್ಪನೆಯನ್ನು ಜಾಗೃತಗೊಳಿಸುವ ಮತ್ತು ದೇಶವನ್ನು ವೈಭವದತ್ತ ಕೊಂಡೊಯ್ಯುವ ಗುರಿಯೊಂದಿಗೆ ಸಂಘ ಹುಟ್ಟಿಕೊಂಡಿದೆ. ಸಂಘಟನೆಯು ಯುವಕರನ್ನು ಶಾರೀರಿಕ, ಬೌದ್ಧಿಕ ಮತ್ತು ಮಾನಸಿಕ ಸದೃಢರನ್ನಾಗಿಸುವತ್ತ ಕಾರ್ಯನಿರ್ವಹಿಸುತ್ತದೆ. ಜಾತೀಯತೆ ಹೆಚ್ಚುತ್ತಿರುವುದರಿಂದ ಸಮಾಜದಲ್ಲಿ ಒಡಕು ಉಂಟಾಗಿದೆ. ಹಿಂದೂಗಳಾದ ನಾವು ನಮ್ಮ ವಿರುದ್ಧ ನಡೆಯುತ್ತಿರುವ ಪಿತೂರಿ ವಿರುದ್ಧ ಸಿಡಿದೇಳಬೇಕು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಸಂಸ್ಕಾರ, ಧರ್ಮ, ಸಂಪ್ರದಾಯ, ಸಂಸ್ಕೃತಿ ಇರುವ ಭಾರತ ರಾಷ್ಟ್ರ ನಿರ್ಮಾಣಕ್ಕಾಗಿ ಎಲ್ಲರೂ ದುಡಿಯುವುದು ಅತ್ಯಗತ್ಯ. ಇಂದಿನ ಪಥ ಸಂಚಲನ ಸಿಂದಗಿ ಪಟ್ಟಣದಲ್ಲಿ ನಡೆದದ್ದು ಇತಿಹಾಸದ ಪುಠಗಳಲ್ಲಿ ಬರೆದಿಡುವಂತಾಗಿದೆ. ಮನಸ್ಸಿಗೆ ಖುಷಿ ತಂದಿದೆ ಎಂದು ಆಶೀರ್ವಚನ ನೀಡಿದರು.
ಈ ವೇಳೆ ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಸುನೀಲಕುಮಾರ ಬಳುಂಡಗಿ, ರಾಕೇಶ ಮಠ, ಅಶೋಕ ನೆಗಿನಾಳ, ಶರಣು ಉಪ್ಪಿನ, ಮಲ್ಲಿಕಾರ್ಜುನ ಅಲ್ಲಾಪುರ, ನವೀನ ಶಹಾಪುರ, ಮಲ್ಲು ಪೂಜಾರಿ, ಎಸ್.ಆರ್.ಪಾಟೀಲ, ಸಂದೀಪ, ಭಾಗೇಶ ಹೂಗಾರ, ಶೇಖರಗೌಡ ಹರನಾಳ, ಬಸನಗೌಡ ಪಾಟೀಲ, ಗುರುರಾಜ ದೇಸಾಯಿ, ರಾಕೇಶ ರಾಂಪೂರಮಠ, ಶಿವಾನಂದ ನಂದಿಕೋಲ, ಕೆ.ಪಿ.ಪೂಜಾರಿ, ಸುರೇಶ ಪಾಟೀಲ, ರಾಜು ಪಾಟೀಲ, ರಾಜು ಬಿರಾದಾರ, ನಂದೀಶ ನಂದರಗಿ, ಮುತ್ತು ಯಲಗಟ್ಟಿ ಸೇರಿದಂತೆ ಆರ್‌ಎಸ್‌ಎಸ್ ಕಾರ್ಯಕರ್ತರು ಭಾಗಹಿಸಿದ್ದರು.
ಗಮನ ಸೆಳೆದ ಗಣವೇಷಧಾರಿ ಮಕ್ಕಳು
ಪಥ ಸಂಚಲನದಲ್ಲಿ ಗಣವೇಷಧಾರಿ ಸಣ್ಣ ಮಕ್ಕಳು ಗಮನ ಸೆಳೆದರು. ಪುಟ್ಟ ಮಗುವೊಂದು ಗಣವೇಷ ಧರಿಸಿದ್ದು ವಿಶೇಷವಾಗಿತ್ತು. ಅದರಂತೆ ಕೆಲ ಮಕ್ಕಳು ಭಾರತಾಂಬೆ, ಸ್ವಾಮಿ ವಿವೇಕಾನಂದ, ಸಂಗೊಳ್ಳಿ ರಾಯಣ್ಣ, ಭಗತಸಿಂಗ, ರಾಮ ಲಕ್ಷ್ಮಣ, ಸೀತೆ ಮತ್ತು ಹನುಮಂತರ ವೇಷ ಧರಿಸಿ ಗಮನ ಸೆಳೆದರು.

