ಇಂದು (ಅಕ್ಟೋಬರ್ ೨೦, ಸೋಮವಾರ) ಗದಗ ತೋಂಟದಾರ್ಯ ಮಠದ ತ್ರಿವಿಧ ದಾಸೋಹಿ ಡಾ.ಸಿದ್ದಲಿಂಗ ಜಗದ್ಗುರುಗಳು ಲಿಂಗೈಕ್ಯರಾಗಿ, ಬಯಲಲ್ಲಿ ಬಯಲಾದ ದಿನ. ಅವರ ಪುಣ್ಯಸ್ಮರಣೆ ನಿಮಿತ್ತ ಈ ವಿಶೇಷ ಲೇಖನ
ಲೇಖನ
– ಶಿಲ್ಪಾ ಮೃತ್ಯುಂಜಯ ಮಿಣಜಿಗಿ
ಶಿಕ್ಷಕರು
ಧಾರವಾಡ
ಮಾಹಿತಿ
ಶರಣೆ ರತ್ನಕ್ಕ ಪಾಟೀಲ, ಗದಗ
ಉದಯರಶ್ಮಿ ದಿನಪತ್ರಿಕೆ
“ನುಡಿದರೆ ಮುತ್ತಿನ ಹಾರದಂತಿರಬೇಕು,
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು,
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು,
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು,
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯ”

ಎನ್ನುವ ವಚನದಂತೆ ತಮ್ಮ ಶಿವನುಭವ ಪ್ರವಚನದ ಮೂಲಕ ಶಿವ ಶರಣರ ವಚನ ತತ್ವಗಳನ್ನು ಭೋಧಿಸಿದಂತಹ ಮತ್ತು ಅನುಷ್ಠಾನಕ್ಕೆ ತಂದಂತಹ ಕೀರ್ತಿ ನಮ್ಮ ಸಿದ್ದಲಿಂಗ ಮಹಾಸ್ವಾಮಿಗಳಿಗೆ ಸಲ್ಲುತ್ತದೆ ಪ್ರವಚನ ಅಷ್ಟೇ ಅಲ್ಲದೆ ತ್ರಿವಿಧ ದಾಸೋಹಿ ಎಂಬ ಹೆಗ್ಗಳಿಕೆಗೆ ಭಾಜನರದಂತಹ ಶ್ರೇಷ್ಠ ವ್ಯಕ್ತಿತ್ವ ಅವರದು.
ತೋಂಟದಾರ್ಯ ಮಠದ ಇತಿಹಾಸ ಮತ್ತು ಪ್ರಮುಖ ಘಟನೆಗಳು
ತೋಂಟದಾರ್ಯ ಮಠವು 15ನೇ ಶತಮಾನದಲ್ಲಿ ಶಿವಯೋಗಿ ಸೂರ್ಯ ಶ್ರೀ ಯಡೆಯೂರು ತೋಂಟದ ಸಿದ್ಧಲಿಂಗ ಯತಿಗಳ ನೇರ ವಾರಸುದಾರಿಕೆಯ ಮಠವಾಗಿದೆ. ಈ ಮಠ ಲಿಂಗಾಯತ ಪರಂಪರೆಯಲ್ಲಿಯೇ ವಿಶೇಷ ಸ್ಥಾನ ಹೊಂದಿದೆ 19ನೇ ಪೀಠಾಧಿಕಾರಿಗಳಾಗಿ ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು 1974 ರಿಂದ 2018 ರವರೆಗೆ ಸುಮಾರು ನಾಲ್ಕು ದಶಕಗಳ ಕಾಲ ಮಠವನ್ನು ಜನಪರ, ಜ್ಞಾನಪರ ಸಂಸ್ಥೆಯಾಗಿ ರೂಪಿಸಿ, ಜಾತಿ, ಮತ, ಲಿಂಗಭೇದವಿಲ್ಲದೆ ಸಮಾನತೆಗಾಗಿ ಹೋರಾಟ ನಡೆಸಿದರು. ಅವಿರತ ಜನಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಅವುರತ ಶ್ರಮಿಸಿದರು.
ಮೂಲತಃ ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೋರವಾರ ಗ್ರಾಮದ ಶಂಕ್ರಮ್ಮ ಮತ್ತು ಮರೆಯ್ಯನವರ ಉದರದಲ್ಲಿ ಜನಿಸಿ, ಮುದ್ದಿನ ಕಣ್ಮಣಿಯಾಗಿ ಬೆಳೆದರು. ಸಿಂದಗಿಯಲ್ಲಿಯೇ ತಮ್ಮ ಬಾಲ್ಯ ಜೀವನ ಕಳೆದ ಶ್ರೀಗಳು ಪ್ರಾಥಮಿಕ ಶಿಕ್ಷಣವನ್ನು ಸಿಂದಗಿಯ ಆದರ್ಶ ಶಿಕ್ಷಕ ಸಿ.ಮ.ಮಣೂರ ಗುರುಗಳ ಗರಡಿಯಲ್ಲಿ ಪೂರೈಸಿ, ಮುಂದೆ ಹುಬ್ಬಳ್ಳಿ ಮುರುಸಾವಿರ ಮಠದಲ್ಲಿ ಮುಂದಿನ ಶಿಕ್ಷಣ ಪೂರೈಸಿದರು.
ಪೀಠಾರೋಹಣ
1974 ರ ಜುಲೈ 29 ರಂದು ತೊಂಟದ ಸಿದ್ದಲಿಂಗ ಶಿವಯೋಗಿಗಳ ಪೀಠ ಪರಂಪರೆಯ 19ನೇ ಪೀಠಾಧಿಪತಿಯಾಗಿ ಡಂಬಳ-ಗದಗ ಸಂಸ್ಥಾನಮಠಕ್ಕೆ ಅಧಿಕಾರ ವಹಿಸಿಕೊಂಡರು. ಅವರ ನೇತೃತ್ವರಲ್ಲೇ ಮಠವು ಧಾರ್ಮಿಕ ಮತ್ತು ಸಮಾಜ ಸೇವೆಯ ನಾನಾ ಕ್ಷೇತ್ರಗಳಲ್ಲಿ ಚೈತನ್ಯವಾಯಿತು.
ಸಮಾಜ ಸೇವೆ
ದಲಿತರು, ದೀನನುಸ್ಥಿತಿಗೊಳಿದವರ ಸೇವೆಯಲ್ಲಿ ಭಾಗಿಯಾಗಿ ಮಠದ ಬಾಗಿಲುಗಳನ್ನು ಎಲ್ಲಾ ಜನಾಂಗ ಮತ್ತು ವರ್ಗದವರಿಗೆ ಮುಕ್ತಗೊಳಿಸಿದ್ದರು. ಇದು ಸಾಮಾಜಿಕ ಸಮಾನತೆ ಮತ್ತು ಪರಿವರ್ತನೆಗೆ ಮಹತ್ವದ ಹಾದಿಯಾಗಿತು. ಬಸವಣ್ಣ ಅನುಯಾಯಿ ಮತ್ತು ಅವರ ತತ್ವಗಳನ್ನು ಸಮಾಜ ಸುಧಾರಣೆಯಾಗಿಸಲು ಪ್ರಯತ್ನಿಸಿದರು.
ಪರಿಸರ ಹೋರಾಟ
ಕಪ್ಪತ್ತಗುಡ್ಡದ ಪರಿಸರವನ್ನು ಕಾಪಾಡಲು ಪೋಸ್ಕೋ ಉಕ್ಕಿನ ಕೈಗಾರಿಕಾ ಸ್ಥಾಪನೆ ವಿರೋಧಿಸಿ ಯಶಸ್ವಿ ಚಳುವಳಿ ನಡೆಸಿದರು. ಧಾರ್ಮಿಕ ಸಂಸ್ಕೃತಿ
ಬಸವತತ್ವ ಹಾಗೂ ಲಿಂಗಾಯತ ತತ್ತ್ವಗಳ ಶ್ರೇಷ್ಠ ಪ್ರತಿಪಾದಕರು. ಸಾಮಾಜಿಕ ನ್ಯಾಯ, ದಲಿತರ ಏಕತೆ, ಜಾತ್ಯತೀತ ಸಮಾಜ ನಿರ್ಮಾಣದ ಪರಿಪಾಟಿಯಲ್ಲಿ ಸಂಕೀರ್ಣ ಸಂಚಲನ ಮಾಡಿದರು.
ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ
ರಾಷ್ಟ್ರಪತಿ ಭವನದಲ್ಲಿ 2001 ರಲ್ಲಿ ರಾಷ್ಟ್ರೀಯ ಕೋಮು ಸೌಹಾರ್ದತಾ ಹಾಗೂ ದೇಶದ ಏಕತಾ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪಡೆದವರು.
ವಚನ ಮತ್ತು ಸಾಹಿತ್ಯ
ದಲಿತರು ಮತ್ತು ಹಿಂದುಳಿದ ವರ್ಗದ ಜನರಿಗೆ ಪ್ರೇರಣೆ ನೀಡಿದ್ದಾರೆ, ಮಠದಲ್ಲಿ ದಲಿತರು ಮತ್ತು ಹಿಂದುಳಿದವರ ಒಗ್ಗಟ್ಟು ಹಾಗೂ ಸಾಹಿತ್ಯ ಚರಿತ್ರೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ವಚನ ಸಾಹಿತ್ಯ ಉಳಿಸಿ ಬೆಳಸಲು ಗಣನೀಯ ಕೊಡುಗೆ ನೀಡಿದ್ದಾರೆ.
ನ್ಯಾಯ ನಿಷ್ಠುರ, ನಿರ್ದ್ವಂದ್ವ, ನಿರಾಡಂಬರ, ಆಧುನಿಕತೆ ಹಾಗೂ ಪ್ರಗತಿಪರ ವಿಚಾರಧಾರೆಗಳ ಧಾರಕರಾಗಿದ್ದರು. ಹಿರಿಯ ಸಾಹಿತಿ ಎಂ.ಎಂ. ಕಲಬುರಗಿ ಅವರ ಮೆಚ್ಚಿನ ವಿದ್ಯಾರ್ಥಿಯಾಗಿದ್ದವರು.
ತೊಂಟದಾರ್ಯ ಸಿದ್ದಲಿಂಗ ಮಹಾಸ್ವಾಮಿಗಳು ಸಮಾಜ, ಧರ್ಮ, ಆಧ್ಯಾತ್ಮ ಮತ್ತು ಪರಿಸರ ಕ್ಷೇತ್ರಗಳಲ್ಲಿ ಅಪಾರ ಸೇವೆ ನೀಡಿದ ಧಾರ್ಮಿಕ ಗುರು ಮತ್ತು ಸಮಾಜ ಸುಧಾರಕರಾಗಿದ್ದಾರೆ. ಅವರು ಮೂಢ ನಂಬಿಕೆ, ಜಾತ್ಯತೀತ ಸಮಾಜದ ನಿರ್ಮಾಣ ಹಾಗೂ ಪರಿಸರ ರಕ್ಷಣೆಯಲ್ಲಿ ಶ್ರೇಷ್ಠ ಕಾರ್ಯಗಳನ್ನು ಮಾಡಿದ್ದಾರೆ. ಅಲ್ಲದೆ ಪ್ರತಿ ಸೋಮವಾರ ತಮ್ಮ ಶ್ರೀಮಠದಲ್ಲಿ ಧರ್ಮ ಗ್ರಂಥ ಪಠಣ, ವಚನ ಚಿಂತನೆ ಇಂತಹ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಅಲ್ಲದೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದಂತಹ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
ನಡಿನ ಹಲವೆಡೆ ಶಾಲೆ – ಕಾಲೇಜು ಹಾಗೂ ಇಂಜಿನಿಯರಿಂಗ್, ಡಿಪ್ಲೋಮಾ ಕಾಲೇಜು ಮತ್ತು ವೃತ್ತಿಪರ ಕೋರ್ಸ್ಗಳ ಕೇಂದ್ರಗಳನ್ನು ತೆರೆದು ಬಡಮಕ್ಕಳಿಗೆ ಶಿಕ್ಷಣ ದಾಸೋಹದ ವ್ಯವಸ್ಥೆ ಕಲ್ಪಿಸಿ ನಾಡಿನ ಅಸಂಖ್ಯಾತ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ.
ಚಿಕ್ಕ ಮಕ್ಕಳಲ್ಲಿ ಬಸವ ಪ್ರಜ್ಞೆ ಮೂಡಿಸಲು ವಚನ ಕಂಠ ಪಾಠಗಳ ಸ್ಪರ್ಧೆ ಏರ್ಪಡಿಸಿ ವಿಜೇತರಾದಂತಹ ಮಕ್ಕಳಿಗೆ ಬಹುಮಾನ ನೀಡುವ ಮೂಲಕ ಮಕ್ಕಳಿಗೆ ಬಾಲ್ಯದಿಂದಲೇ ವಚನ ಸಂಸ್ಕೃತಿ ಬೆಳೆಸಲು ಪೂರಕ ವಾತಾವರಣ ನಿರ್ಮಿಸಿದ್ದರು.
*ಗದಗಜಿಲ್ಲೆಯ ಶಿಕ್ಷಣ ಕ್ರಾಂತಿಯ ಹರಿಕಾರರು ನಮ್ಮ ಶ್ರೀಗಳು, ಅಲ್ಲದೆ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಒದಗಿಸಿಕೊಡಲು ಅವಿರತ ಶ್ರಮಿಸಿದವರು. “ಸಿಂಧಗಿ ತುಂಬಿತೆಲ್ಲೆಡೆ ಜ್ಞಾನದ ಬಿಂದಿಗೆ” ಎನ್ನುವ ವಾಣಿಯನ್ನು ಅಕ್ಷರಶಃ ನಿಜ ಮಾಡಿದ್ದಾರೆ.
ಶ್ರೀಗಳು ಹತ್ತು-ಹಲವಾರು ಪ್ರಶಸ್ತಿಗೆ ಭಾಜನರಾದರೂ ಯಾವುದೇ ಆಡಂಬರ ವಿಲ್ಲದೆ ಹಮ್ಮು ಬಿಮ್ಮಿಲ್ಲದೇ ಶೀಮಠದ ಏಳಿಗೆಗೆ ಶ್ರಮಿಸಿದವರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಮಾನ್ಯರ ಸ್ವಾಮೀಜಿ, ಬಸವಶ್ರೀ ಪ್ರಶಸ್ತಿ, ಕನ್ನಡ ಜಗದ್ಗುರು ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗೆ ಭಾಜನರಾಗಿ ಆ ಪ್ರಶಸ್ತಿಗಳಿಗೆೇ ಗೌರವ ತಂದವರು.
ಪ್ರತಿ ವರ್ಷ ಗದಗ ಶ್ರೀಮಠದಲ್ಲಿ ನಡೆಯುವ “ರೊಟ್ಟಿ ಜಾತ್ರೆ” ಯೆಂದೇ ಖ್ಯಾತಿ ಹೊಂದಿದ ಜಾತ್ರಾ ಮಹೋತ್ಸವದಲ್ಲಿ ಆರೋಗ್ಯ ತಪಾಸಣೆ ಶಿಬಿರ, ಯೋಗ ಶಿಬಿರ, ರಕ್ತದಾನ ಶಿಬಿರ ನಡೆಸುವಲ್ಲಿ ಶ್ರೀ ಮಠ ತನ್ನದೇ ಆದಂತಹ ಖ್ಯಾತಿ ಹೊಂದಿದೆ. ಶ್ರೀಗಳ ಇಂತಹ ಎಲ್ಲ ಸಮಾಜ ಮುಖಿ ಕಾರ್ಯಗಳನ್ನು ಪರಿಗಣಿಸಿ ಶ್ರೀಗಳಿಗೆ ಗುಲ್ಬರ್ಗ ವಿಶ್ವವಿದ್ಯಾಲಯವು 1994ರಲ್ಲಿ ಗೌರವ ಡಾಕ್ಟರ್ರೇಟ್ ಪದವಿಯನ್ನು ನೀಡಿ ಗೌರವಿಸಿತು.
ಇಂತಹ ಮಹಾನ್ ಚೇತನ ಶರಣರಿಗೆ “ಮರಣವೇ ಮಹಾನವಮಿ” ಎನ್ನುವ ರೀತಿಯಲ್ಲಿ ಅಕ್ಟೋಬರ್ 20 /2018 ರಲ್ಲಿ ಸಕಲ ಭಕ್ತರ ಬಳಗವನ್ನು ಅಗಲಿದರು.
ಅವರ ನೆನಪು ಮಾತ್ರ ಅಜರಾಮರ. ಏಕೆಂದರೆ ನಾನು ಬಾಲ್ಯದಿಂದಲೂ ಮಠದ ಆವರಣದಲ್ಲಿ ವಚನ ಮತ್ತು ಸಂಗೀತ ಕಲಿಯುವಾಗ ನನಗೆ ನೀಡಿದ ಪ್ರೋತ್ಸಾಹ ಮತ್ತು ಘನ ಆಶೀರ್ವಾದದಿಂದ ಎಂತಹ ಪರಿಸ್ಥಿತಿಯೇ ಬರಲಿ ಗೆಲ್ಲುವೆ ಎನ್ನುವ ಧೈರ್ಯ ಮೂಡಿಸಿರುವ ಶ್ರೀಗಳು ಎಂದೆಂದಿಗೂ ಅಜರಾಮರ..


