ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ವಿದ್ಯಾರ್ಥಿಗಳ ಸಾಧನೆಗೆ ಅಡ್ಡಿಯಾಗುವ ಮೊಬೈಲ್ ದುರ್ಬಳಕೆಯಿಂದ ದೂರವಿದ್ದುಕೊಂಡು ಆಧುನಿಕ ಜಗತ್ತಿನಲ್ಲಿ ಸವಾಲುಗಳನ್ನು ಮೆಟ್ಟಿ ನಿಲ್ಲಲು ಸಕಾರಾತ್ಮಕ ಭಾವನೆಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವಂತಾಗಬೇಕೆಂದು ಕಂದಾಯ ವಿಭಾಗಾಧಿಕಾರಿ ಗುರುನಾಥ ದಡ್ಡೆ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2025-26 ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್. ಎಸ್. ಎಸ್,ಐ ಕ್ಯೂ ಎ ಸಿ ಹಾಗೂ ವಿವಿಧ ಘಟಕಗಳ ಉದ್ಘಾಟನೆ ಸಮಾರಂಭ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣದಿಂದ ವೈಯಕ್ತಿಕ ಹಾಗೂ ಸಾಮಾಜಿಕ ಬದಲಾವಣೆ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಚ ಪಟ್ಟಣಶೆಟ್ಟಿ ಮಾತನಾಡಿ, ಈ ಕಾಲೇಜಿನಲ್ಲಿ ಉತ್ತಮ ಶಿಕ್ಷಣ ದೊರಕುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ಈ ಕಾಲೇಜಿಗೆ, ನಿಮ್ಮ ತಂದೆ ತಾಯಂದಿರಿಗೆ ಕೀರ್ತಿ ತರುವ ಕಾರ್ಯ ವಿದ್ಯಾರ್ಥಿಗಳು ಮಾಡುವಂತಾಗಬೇಕು. ಕಾಲೇಜಿನ ಅಭಿವೃದ್ಧಿಗೆ ನಾನು ಸದಾ ಸಿದ್ಧನಾಗಿದ್ದೇನೆ. ಎಲ್ಲರೂ ಕಾಲೇಜಿನ ಪ್ರಗತಿಗೆ ಶ್ರಮಿಸಬೇಕು ಎಂದು ಹೇಳಿದರು.
ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಗುರು ಹಿರಿಯರಿಗೆ ಗೌರವ ನೀಡುವ ಗುಣ ಬೆಳೆಸಿಕೊಳ್ಳಬೇಕು. ಮುಂದೆ ಗುರಿ ಹಿಂದೆ ಗುರು ಇಟ್ಟುಕೊಂಡು ಅಧ್ಯಯನಶೀಲರಾಗಬೇಕು. ಸಾಧನೆಗೆ ಆತ್ಮವಿಶ್ವಾಸ ಬೇಕು. ಗ್ರಾಮೀಣ ಭಾಗದಲ್ಲಿದ್ದರೂ ಕನ್ನಡ ಮಾಧ್ಯಮದಲ್ಲೇ ಓದಿದರೂ ಉನ್ನತ ಹುದ್ದೆ ಪಡೆಯಬಹುದು. ಒಳ್ಳೆಯವರ ಸಂಗಮಾಡಿ, ಮಾನವೀಯತೆ ಗುಣ ಇರಲಿ ಎಂದು ಹೇಳಿದರು.
ಅಧ್ಯಕ್ಷತೆಯ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಬಿ. ಹೊಸಮನಿ ಮಾತನಾಡಿ, ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿಗಳು ವಿದ್ಯಾರ್ಥಿಗಳ ವಿಕಾಸಕ್ಕೆ ಶ್ರಮಿಸುತ್ತಿದ್ದಾರೆ. ಒಳ್ಳೆಯ ಗ್ರಂಥಾಲಯ ಇದ್ದು ಸು. 8 ಸಾವಿರ ಪುಸ್ತಕಳಿವೆ. ಅವುಗಳನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಆಲಸ್ಯ, ನಿದ್ರೆ ಇವು ವಿದ್ಯಾರ್ಥಿಗಳಿಗೆ ಶತ್ರು ಗಳಾಗಿವೆ. ಅವುಗಳನ್ನು ವಿದ್ಯಾರ್ಥಿಗಳು ಗೆಲ್ಲಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ರೇಣುಕಾ ಅಂಬಲಿ,ರಾಜ್ಯಶಾಸ್ತ್ರ ವಿಭಾಗದ ಡಾ. ಹೆಚ್. ಎಂ. ನಾಟಿಕಾರ ಇದ್ದರು.
ಕನ್ನಡ ಸಹಾಯಕ ಪ್ರಾಧ್ಯಾಪಕ ಶ್ರೀಶೈಲ ಬಳವಾಟ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಕಾಂ ವಿದ್ಯಾರ್ಥಿನಿಯರು ಪ್ರಾರ್ಥನೆ ಗೀತೆ ಹಾಡಿದರು. ಕನ್ನಡ ವಿಭಾಗದ ಬಸವರಾಜ ಮಾರೆಮ್ಮಗೋಳ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಇಸ್ಮಾಯಿಲ್ ಶಫಿಯುಲ್ಲ ಕಾರ್ಯಕ್ರಮ ನಿರೂಪಿಸಿದರು.ಡಾ. ಭೀಮಶಿ ಹಡಪದ ವಂದಿಸಿದರು.