ಉದಯರಶ್ಮಿ ದಿನಪತ್ರಿಕೆ
ವರದಿ: ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಜನರು ಭರದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಪಟ್ಟಣದಲ್ಲಿ ಕೆಲ ದಿನಗಳಿಂದ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಹೊಸ ಬಟ್ಟೆ, ಸೀರೆ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಟ್ಟೆ ಅಂಗಡಿಗಳಲ್ಲಿ ಕಂಡು ಬರುತ್ತಿದ್ದಾರೆ. ದೀಪಾವಳಿ ಹಬ್ಬವು ನಾಳೆಯಿಂದ ಆರಂಭವಾಗುತ್ತಿರುವದರಿಂದಾಗಿ ಶನಿವಾರ ಬಟ್ಟೆ ಅಂಗಡಿ ಸೇರಿದಂತೆ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ವಿವಿಧೆಡೆಗಳಿಂದ ಜನರು ಆಗಮಿಸಿದ್ದು ಕಂಡು ಬಂತು.
ದೀಪಾವಳಿ ಹಬ್ಬಕ್ಕೆ ಬೇಕಾದ ಪೂಜಾ ಸಾಮಗ್ರಿಗಳು, ಆಕಾಶ ಬುಟ್ಟಿ, ಹೊಸ ಬಟ್ಟೆ ಸೇರಿದಂತೆ ಇನ್ನೀತರ ವಸ್ತುಗಳನ್ನು ಖರೀದಿಸುವಲ್ಲಿ ಜನರು ತುಂಬಾ ಬ್ಯುಸಿಯಾಗಿದ್ದಾರೆ. ದೀಪಾವಳಿ ಹಬ್ಬವನ್ನು ಎಲ್ಲ ಜನರು ಆಚರಿಸಲು ಸಿದ್ದಗೊಳ್ಳುತ್ತಿದ್ದಾರೆ.
ವರ್ಷಕ್ಕೊಮ್ಮೆ ಬರುವ ಈ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲು ಕಳೆದ ಹಲವು ದಿನಗಳಿಂದಲೇ ಜನರು ತಮ್ಮ ಮನೆ, ಅಂಗಡಿ-ಮುಂಗಟ್ಟುಗಳ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ಕೊಂಡಿದ್ದರು. ಇದೀಗ ಸಂಭ್ರಮದ ದೀಪಾವಳಿ ಹಬ್ಬಕ್ಕೆ ಕ್ಷಣ ಗಣನೆ ಆರಂಭವಾಗಿದೆ.
ಭಾನುವಾರ ನೀರು ತುಂಬುವ ಹಬ್ಬದಿಂದ ಆರಂಭವಾಗುವ ದೀಪಾವಳಿ ಹಬ್ಬ ಐದು ದಿನಗಳ ಕಾಲ ನಡೆಯಲಿದೆ.
ಸೋಮವಾರ ಬೆಳಗ್ಗೆ ನರಕ ಚತುದರ್ಶಿ ಮೂಹರ್ತ ಇರುವದರಿಂದಾಗಿ ಬೆಳಗ್ಗೆ ಬೇಗನೆ ಎದ್ದು ಮಕ್ಕಳು, ಪುರುಷರು ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ ಹೆಣ್ಣುಮಕ್ಕಳಿಂದ ಆರತಿ ಮಾಡಿಸಿಕೊಳ್ಳುತ್ತಾರೆ. ಈ ಸಲ ದೀಪಾವಳಿ ಅಮವಾಸ್ಯೆ ಸೋಮವಾರ ಸಂಜೆ ಆರಂಭವಾಗಿ ಮಂಗಳವಾರ ಸಂಜೆಯವರೆಗೂ ಇರುತ್ತದೆ. ಇದರಿಂದಾಗಿ ಎರಡು ದಿನ ಕಾಲ ದೀಪಾವಳಿ ಅಮವಾಸ್ಯೆ ಆಚರಿಸುವ ಸಾಧ್ಯತೆಯಿದೆ. ಪಟ್ಟಣದಲ್ಲಿ ಗುರು-ಹಿರಿಯರು ಸೋಮವಾರ ನರಕ ಚತುದರ್ಶಿ, ಮಂಗಳವಾರ ಅಮವಾಸ್ಯೆ ಆಚರಿಸುವದು ಎಂದು ನಿರ್ಣಯಿಸಿದ್ದಾರೆ. ಇದರಂತೆ ಪಟ್ಟಣದಲ್ಲಿ ಮಂಗಳವಾರ ದೀಪಾವಳಿ ಅಮವಾಸ್ಯೆ ಆಚರಿಸಲಾಗುತ್ತದೆ. ದೀಪಾವಳಿ ಅಮವಾಸ್ಯೆಯಂದು ಪ್ರತಿ ಮನೆ, ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬುಧವಾರ ಬಲಿಪಾಡ್ಯಮಿ ಇದೆ.
ದೀಪಾವಳಿ ಹಬ್ಬದಲ್ಲಿ ಬಗೆ ಬಗೆಯ ಸಿಹಿ ತಿನಿಸುಗಳನ್ನು ಸವಿಯುತ್ತಾರೆ. ದೀಪಾವಳಿ ಹಬ್ಬದ ಲಕ್ಷ್ಮೀ ಪೂಜೆ ವಿಶೇಷವಾಗಿ ಚೆಂಡು ಹೂ ಸೇರಿದಂತೆ ವಿವಿಧ ತರಹದ ಹೂಗಳು, ಹಣ್ಣುಗಳು ಮಾರುಕಟ್ಟೆ ಬರುತ್ತವೆ. ಚೆಂಡು ಹೂ ಸೇರಿದಂತೆ ವಿವಿಧ ಹೂಗಳ ದರ ದುಬಾರಿಯಾಗುವ ಸಾಧ್ಯತೆಯಿದೆ. ಅಂಗಡಿಗಳಲ್ಲಿ ತಹರೇವಾರಿ ಆಕಾಶಬುಟ್ಟಿಗಳು ಮಾರಾಟಕ್ಕೆ ಬಂದಿವೆ. ಆಕಾಶ ಬುಟ್ಟಿಗಳನ್ನು ಜನರು ಖರೀದಿ ಮಾಡುವದು ಕಂಡುಬಂದಿತ್ತು. ಪಟ್ಟಣದಲ್ಲಿ ಒತ್ತುಗಾಡಿಯಲ್ಲಿ ವಿವಿಧ ಆಕಾರದಲ್ಲಿರುವ ದೀಪದ ಹಣತೆ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳು, ಪೂಜಾ ಸಾಮಗ್ರಿಗಳು ಸೇರಿದಂತೆ ಹಬ್ಬಕ್ಕೆ ಅಗತ್ಯ ಸಾಮಾನುಗಳ ಮಾರಾಟ ಭರಾಟೆ ಕಂಡುಬಂದಿತ್ತು.
ನೀರು ತುಂಬುವ ಹಬ್ಬದ ದಿನದಿಂದಲೇ ತಮ್ಮ ತಮ್ಮ ಮನೆ, ಅಂಗಡಿಗಳ ಮುಂದೆ ಆಕಾಶ ಬುಟ್ಟಿ ಹಾಕುವ ಜೊತೆಗೆ ದೀಪಗಳನ್ನು ಇಟ್ಟು ದೀಪಾವಳಿ ಆಚರಿಸುತ್ತಾರೆ. ದೀಪಾವಳಿ ಹಬ್ಬವು ಎಲ್ಲರ ಜೀವನದಲ್ಲಿ ಅಂಧಕಾರವನ್ನು ತೊಳೆದು ಹಾಕಿ ಜೀವನದಲ್ಲಿ ಹೊಸ ಬೆಳಕು ಮೂಡಿಸಿಕೊಳ್ಳಬೇಕೆಂಬ ಸಂದೇಶ ನೀಡುತ್ತದೆ.