ಉದಯರಶ್ಮಿ ದಿನಪತ್ರಿಕೆ
ಹೆಚ್.ಡಿ. ಕೋಟೆ: ಆದಿವಾಸಿ ಮತ್ತು ಬುಡಕಟ್ಟು ಜನರಲ್ಲಿ ಆರೋಗ್ಯ ಬಗ್ಗೆ ಅರಿವು ಮೂಡಿಸುವ ಮೂಲಕ, ನಮ್ಮ ತಾಲೂಕಿನಲ್ಲಿ ಸಿಕೆಲ್ ಸೆಲ್ (ಕುಡಗೋಲು) ರೋಗ ಮರುಕಳಿಸದಂತೆ ಜಾಗೃತವಹಿಸಬೇಕಾಗಿದೆ ಎಂದು ತಹಸೀಲ್ದಾರ್ ಶ್ರೀನಿವಾಸ್ ಹೇಳಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೈಸೂರು, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ಹೆಚ್ ಡಿ ಕೋಟೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೆಚ್ ಡಿ ಕೋಟೆ ಹಾಗು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹೆಚ್ ಡಿ ಕೋಟೆ ವತಿಯಿದ ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಿಕೆಲ್ ಸೆಲ್ ಅನೀಮಿಯ ಜಾಗೃತಿ ನಿರ್ಮೂಲನ ಕಾರ್ಯಕ್ರಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಜಾಗೃತಿ ಕಾರ್ಯಕ್ರಮಗಳ ಮೂಲಕ ಆದಿವಾಸಿ ಜನರಲ್ಲಿ ಆರೋಗ್ಯ ಕಾಳಜಿ ಬಗ್ಗೆ ಅರಿವು ಮೂಡಿಸಿ, ರೋಗಗಳು ಉದ್ಭವಿಸದಂತೆ ನಾವು ನೀವೆಲ್ಲರೂ ಸಹಕರಿಸಬೇಕಾಗಿದೆ ಎಂದು ತಹಸೀಲ್ದಾರ್ ಶ್ರೀನಿವಾಸ್ ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಮಾತನಾಡಿ, ಈ ಹಿಂದೆ ಸಿಕೆಲ್ ಸೆಲ್ ಅನೀಮಿಯ ಬುಡಕಟ್ಟು ಮತ್ತು ಆದಿವಾಸಿ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು. ಇದರಿಂದ ಎಚ್ಚೆತ್ತುಕೊಂಡು ಹೆಚ್ಚುಹೆಚ್ಚು ತಪಾಸಣೆ ನಡೆಸುವ ಮೂಲಕ ರೋಗ ಪತ್ತೆ ಮಾಡಿ, ಚಿಕಿತ್ಸೆ ನೀಡುತ್ತಾ ಬರುತ್ತಿದ್ದೇವೆ. ಹೆಚ್ ಡಿ ಕೋಟೆ ತಾಲೂಕಿನಲ್ಲೇ ಶೇಕಡಾ 92 ರಷ್ಟು ಸ್ಕ್ರೀನಿಂಗ್ ನಡೆಸಿದ್ದೇವೆ. ಈ ಮೂಲಕ ಅತಿ ಹೆಚ್ಚು ಆರೋಗ್ಯ ತಪಾಸಣೆ ನಡೆಸಿದ ಹೆಗ್ಗಳಿಕೆ ಕೂಡ ತಾಲೂಕಿಗಿದೆ. 120ಕ್ಕೂ ಅಧಿಕ ಹೆಚ್ಚು ಸಿಕೆಲ್ ಸೆಲ್ ಅನೀಮಿಯ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ರಕ್ತ ಮಾದರಿಯನ್ನು ಜಿಲ್ಲಾ ಕೇಂದ್ರಕ್ಕೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ಸಿಕಲ್ ಸೆಲ್ ಕಾಯಿಲೆ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಮೈಸೂರು ಜೆ.ಎಸ್. ಎಸ್ ಮೆಡಿಕಲ್ ಕಾಲೇಜಿನ ಅನುವಂಶಿಯ ರೋಗ ತಜ್ಞೆ ಡಾ. ದೀಪಾಭಟ್, ಈ ಒಂದು ಕಾಯಿಲೆಯನ್ನು ತಡೆಯಲು ಪ್ರಮುಖವಾಗಿ ಸಮುದಾಯ ಹಂತದಲ್ಲಿ ಹೆಚ್.ಪಿ.ಎಲ್.ಸಿ ಟೆಸ್ಟ್ ನ್ನು ಕಡ್ಡಾಯವಾಗಿ ಮಾಡಬೇಕು. ಗರ್ಭಿಣಿಯರಲ್ಲಿ ಸಿಕಲ್ ಸೆಲ್ ಪಾಸಿಟಿವ್ ಕಂಡುಬಂದರೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಆ ರೋಗ ಮಕ್ಕಳಿಗೆ ಬರದಂತೆ ತಡೆಯಬಹುದು. ಸಿಕಲ್ ಸೆಲ್ ಪಾಸಿಟಿವ್ ಇರುವವರಲ್ಲಿ ಕಬ್ಬಿಣದ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಫೋಲಿಕ್ ಆಸಿಡ್
ಮಾತ್ರೆಗಳನ್ನು ನೀಡಬಾರದು. ಇದರ ಬಗ್ಗೆ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಜಾಗೃತವಹಿಸಬೇಕು
ಮುಂದಿನ ದಿನಗಳಲ್ಲಿ ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಸಿಕಲ್ ಸೆಲ್ ಕ್ಲಿನಿಕ್ ತೆರೆಯಲಾಗುವುದು. ಪಾಸಿಟಿವ್ ಇರುವವರು ಪ್ರತಿ ಮೂರು ತಿಂಗಳಿಗೊಮ್ಮೆ ಕ್ಲಿನಿಕ್ ಗೆ ಬಂದು ಪರೀಕ್ಷೆ ಮಾಡಿಸಿಕೊಂಡು, ರೋಗ ಗುಣಪಡಿಸಿಕೊಳ್ಳಬೇಕು ಎಂದು ಹೇಳಿದರು.
ಶ್ರೀ ಸಾಯಿ ಗಿರಿಜನ ಪ್ರಗತಿ ಫೌಂಡೇಷನ್ ಅಧ್ಯಕ್ಷರಾದ ಡಾ. ರತ್ನಮ್ಮ ಮಾತನಾಡಿ, ಮುಂದಿನ ಪೀಳಿಗೆ ಈ ರೋಗದಿಂದ ಮುಕ್ತರಬೇಕು ಎಂಬ ಉದ್ದೇಶದಿಂದ ಮನೆ ಮನೆಗೂ ತೆರಳಿ ಜಾಗೃತಿ ಮೂಡಿಸುತ್ತಿದ್ದೇವೆ. ಸಿಕೆಲ್ ಸೆಲ್ ರೋಗ ಗುಣಲಕ್ಷಣಗಳು ಇರುವ ವ್ಯಕ್ತಿಗಳ ಆರೋಗ್ಯ ತಪಾಸಣೆ ನಡೆಸಿ, ಮಾತ್ರೆ, ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲ್ಯಾಂಪ್ ಸೊಸೈಟಿ ಮಹಾಮಂಡಳಿ ಅಧ್ಯಕ್ಷ ಬಿ ಕಾವೇರ, ಲ್ಯಾಂಪ್ ಸೊಸೈಟಿ ನಿರ್ದೇಶಕ ಪುಟ್ಟ ಬಸವಯ್ಯ, ಲ್ಯಾಂಪ್ ಸೊಸೈಟಿ ಮಾಜಿ ಅಧ್ಯಕ್ಷ ಕಾಳ ಕಲ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಗಾಯತ್ರಿ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕಚೇರಿಯ ನಾಗರಾಜು, ಡಾ.ಪೂಜಾ, ಡಾ.ಮಹಾಲಕ್ಷ್ಮಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ವಿವಿಧ ಹಾಡಿಗಳ ಜನರು ಉಪಸ್ಥಿತರಿದ್ದರು.

