ರಸ್ತೆ ಅಗಲೀಕರಣದಲ್ಲಿ ಭಾಗಿಯಾದವರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಸರ್ಕಾರ ರಸ್ತೆ ಅಗಲೀಕರಣ ಮಾಡಲು ಕೆಲವು ನಿಯಮಾವಳಿಗಳನ್ನು ರೂಪಿಸಿದೆ. ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿನ ಜಿಲ್ಲಾ ಮುಖ್ಯ ರಸ್ತೆಯ ಅಗಲೀಕರಣ ಮಾಡುವ ಈ ನಿಯಮಾವಳಿಗಳನ್ನು ಗಾಳಿ ತೂರಿ ರಸ್ತೆ ಅಗಲೀಕರಣ ಮಾಡುವ ಮೂಲಕ 142 ಕುಟುಂಬಗಳು ನಿರಾಶ್ರಿತರಾಗುವಂತೆ ಮಾಡಲಾಗಿದೆ. ಈ ಘಟನೆಯಲ್ಲಿ ಅನ್ಯಾಯವಾದ ಜನರಿಗೆ ನ್ಯಾಯ ಸಿಗುವವರೆಗೂ ಈ ಹೋರಾಟಕ್ಕೆ ಸದಾ ನನ್ನಬೆಂಬಲವಿದೆ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.
ಪಟ್ಟಣದ ಮಿನಿವಿಧಾನಸೌಧದ ಆವರಣಗೋಡೆಗೆ ಹೊಂದಿಕೊಂಡಂತೆ ಹಾಕಲಾಗಿರುವ ಶಾಮಿಯಾನದಲ್ಲಿ ಕಳೆದ ಮೂರು ದಿನಗಳಿಂದ ತಾಲೂಕಿನ ಕುದರಿಸಾಲವಾಡಗಿ ಗ್ರಾಮದ ರಸ್ತೆ ಅಗಲೀಕರಣ ನೆಪದಲ್ಲಿ ಸ್ವಂತ ಮನೆಗಳನ್ನು ದ್ವಂಸಮಾಡಿ 142 ಕುಟುಂಬಗಳನ್ನು ಬೀದಿಗೆ ತಳ್ಳಿದ ಕ್ರಮವನ್ನು ಖಂಡಿಸಿ ಹಾಗೂ ನಿರಾಶ್ರಿತರಿಗೆ ಸೂಕ್ತ ಪರಿಹಾರ ನೀಡುವದು, ತಪಿಸ್ಥತ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ಯಾಳವಾರಕ್ಕೆ ಹೋಗುವ ರಸ್ತೆಯ ಅಗಲೀಕರಣ ನೆಪದಲ್ಲಿ ಸ್ವಂತ ಕಬ್ಜಾದಲ್ಲಿರುವ ನೂರಾರು ಮನೆಗಳನ್ನು ಕೆಡವಿ ಹಾಕುವ ಮೂಲಕ ಈ ಕುಟುಂಬ ಬಾಂಧವರನ್ನು ಬೀದಿ ಪಾಲಾಗುವಂತೆ ಮಾಡಲಾಗಿದೆ. ಇದು ನೋವಿನ ಸಂಗತಿ. ಈ ಭಾಗದ ದೇವರಹಿಪ್ಪರಗಿ ಶಾಸಕರು ಅನುಕಂಪದ ಆಧಾರದ ಮೇಲೆ ಆಯ್ಕೆಯಾಗಿರುವದನ್ನು ಮರೆತು ಮುಗ್ಧ ಜನರ ಮೇಲೆ ಈ ರೀತಿಯಲ್ಲಿ ಮಾಡುತ್ತಿರುವುದು ಸರಿಯಲ್ಲ. ಶಾಸಕರು ತುಘಲಕ್ ದರ್ಬಾರ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುತ್ತಿಲ್ಲ. ಈ ಮನೆಗಳನ್ನು ಕಳೆದ ಎರಡು ತಿಂಗಳ ಹಿಂದೆ ತೆರವುಗೊಳಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ, ಸಿಇಓ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ನಾನು ಜಿಲ್ಲೆಯ ಉಭಯ ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಅವರ ಗಮನಕ್ಕೆ ತಂದಿದ್ದೇನೆ. ಅಲ್ಲದೇ ಸಂಬಂಧಿಸಿದ ಮಂತ್ರಿ, ಸಿಎಂ ಅವರ ಗಮನಕ್ಕೆ ತಂದಿದ್ದು. ಅವರು ಇದರ ಕುರಿತು ತನಿಖೆ ಮಾಡುವಂತೆ ಸೂಚನೆ ನೀಡಿದ್ದಾರೆ. ಎರಡು-ಮೂರು ದಿನಗಳಲ್ಲಿ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಈ ರಸ್ತೆ ಅಗಲೀಕರಣದಲ್ಲಿ ನಿರಾಶ್ರಿತರಾದ ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ನಾನು ಅವರೊಂದಿಗೆ ಸದಾ ಇದ್ದು ನ್ಯಾಯ ಸಿಗುವಂತೆ ಮಾಡುವುದಾಗಿ ಭರವಸೆ ನೀಡಿದರು.
ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿರುವ ಅಶೋಕಗೌಡ ಪಾಟೀಲ ಮಾತನಾಡಿ, ನಾವು ಕೈಗೊಂಡಿರುವ ಧರಣಿಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಗ್ರಾಮದಲ್ಲಿ ರಸ್ತೆ ನಿರ್ಮಾಣ ಮಾಡಲು ನಮ್ಮ ತಕರಾರು ಸಹ ಇಲ್ಲ. ರಸ್ತೆ ಇಲ್ಲದ ಜಾಗೆಯಲ್ಲಿ ರಸ್ತೆ ಮಾಡಲು ಹೊರಟ ಪರಿಣಾಮ ಅನೇಕ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಅನೇಕ ಮನೆಗಳು, ಡಾ.ಅಂಬೇಡ್ಕರ ಭವನ, ಹೇಮರಡ್ಡಿ ಮಲ್ಲಮ್ಮ ವೃತ್ತ, ಕಾಲೇಸಾಬ ದರ್ಗಾ ಸೇರಿದಂತೆ ಅನೇಕ ಮರಗಳು ತೆರವುಗೊಂಡಿವೆ. ಕುದರಿಸಾಲವಾಡಗಿ ಗ್ರಾಮಕ್ಕೆ ಯಾರಾದರೂ ಬಂದು ನೋಡಿದರೆ ನಾವು ಮಾಡುತ್ತಿರುವ ಹೋರಾಟದ ಬಗ್ಗೆ ಗೊತ್ತಾಗುತ್ತದೆ. ನಿರಾಶ್ರಿತರಿಗೆ ಸೂಕ್ತ ನಿವೇಶನ ನೀಡಿ ಮನೆ ನಿರ್ಮಿಸಿಕೊಡಬೇಕು. ಅವರಿಗೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕು. ಈ ಘಟನೆಯಲ್ಲಿ ಸೂಕ್ತ ತನಿಖೆ ನಡೆಸಿ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಸೇರಿದಂತೆ ನಾವು ಮುಂದಿಟ್ಟಿರುವ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ. ಈಗ ಬೆಳಗ್ಗೆಯಿಂದ ಸಂಜೆಯವರೆಗೆ ಮಾತ್ರ ಧರಣಿ ನಡೆಸಲಾಗುತ್ತಿದೆ. ನಮ್ಮ ಸ್ಪಂದನೆ ಸಿಗದೇ ಹೋದರೆ ಮುಂಬರುವ ದಿನಗಳಲ್ಲಿ ಅಹೋ ರಾತ್ರಿ ಧರಣಿ, ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.
ಧರಣಿ ಉದ್ದೇಶಿಸಿ ದೇವರಹಿಪ್ಪರಗಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸರಿತಾ ನಾಯಕ, ಮುಖಂಡರಾದ ಅಶೋಕ ಚಲವಾದಿ, ಪರಶುರಾಮ ದಿಂಡವಾರ, ಗುರುರಾಜ ಗುಡಿಮನಿ, ನಜೀರಅಹ್ಮದ ಬೀಳಗಿ, ಬಸವರಾಜ ಕಾಮನಕೇರಿ, ರಾಜು ಸಿಂಧಗೇರಿ, ಅರವಿಂದ ಸಜ್ಜನ, ಪ್ರಕಾಶ ಗುಡಿಮನಿ, ವಿದ್ಯಾ ಪಾಟೀಲ, ಶ್ರೀನಾಥ ಓಲೇಕಾರ, ಯಮನೂರಿ ಚಲವಾದಿ ಇತರರು ಮಾತನಾಡಿದರು.
ಇಂದಿನ ಧರಣಿಯಲ್ಲಿ ಬಸವರಾಜ ದೇಸಾಯಿ, ಶಾಂತಗೌಡ ಪಾಟೀಲ, ಅಶೋಕ ದೇಸಾಯಿ, ಡಾ.ಹಸನ ಢವಳಗಿ, ಕಾಮೇಶ ಭಜಂತ್ರಿ, ಮಲ್ಲನಗೌಡ ಾಟೀಲ, ಮಲ್ಲು ತಳವಾರ,ಅಣ್ಣುಗೌಡ ಪಾಟೀಲ, ಅದಾಮಸಾಬ ಢವಳಗಿ, ಕಲ್ಲಪ್ಪ ಮಟ್ಟಿ, ಚಂದ್ರಗೌಡ ಹುಣಶ್ಯಾಳ, ಶ್ರೀಕಾಂತ ಹಚಡದ, ಬಾಬು ಪಿಂಜಾರ, ನಜೀರಪಟೇಲ ಗುಡ್ನಾಳ, ದಾವಲಸಾಬ ಅತ್ತಾರ, ಯಾಕೂಬ ಎಲಿಗಾರ, ಶಿವಶಂಕರ ತಮದಡ್ಡಿ, ಅಲ್ತಾಪ ಅತ್ತಾರ, ಪ್ರಮೋದಗೌಡ ಹಚಡದ, ಶಿವರಾಜ ಹಚಡದ, ಪಾವೆಡಪ್ಪ ಇಂಗಳಗಿ, ಎನ್.ಆರ್. ಗುಂಡಳ್ಳಿ, ರೇವಣಸಿದ್ದ ಇಂಗಳಗಿ, ಶಕೀನಾ ಎಲಿಗಾರ, ಗಂಗವ್ವ ಇಂಗಳಗಿ, ಚಂದ್ರಕಲಾ ಇಂಗಳಗಿ ಸೇರಿದಂತೆ ಇತರರು ಭಾಗವಹಿಸಿದ್ದರು.