ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ, ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಕರೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ ಚುನಾವಣೆಗಳು ಸಮೀಪಿಸುತ್ತಿದ್ದು ಈ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸುವ ನಿಟ್ಟಿನಲ್ಲಿ ಮಹಿಳಾ ಕಾರ್ಯಕರ್ತೆಯರು ಶ್ರಮಿಸಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ, ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಕರೆ ನೀಡಿದರು.
ವಿಜಯಪುರದ ಸ್ಟಾರ್ ಸಭಾಂಗಣದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಮೀಜಾ ನದಾಫ್ ಅವರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ, ಈ ಎಲ್ಲ ಜನಪರ ಕಾರ್ಯಗಳನ್ನು ಮಹಿಳಾ ಕಾರ್ಯಕರ್ತೆಯರು ಜನರ ಮನೆ ಮನೆಗೆ ತಿಳಿಸುವ ಕಾರ್ಯ ಮಾಡಬೇಕು, ಆ ಮೂಲಕ ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ ಚುನಾವಣೆಗಳಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಅಯ್ಕೆಯಗುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.
ಮಹಿಳಾ ಕಾರ್ಯಕರ್ತೆಯರು ತಮ್ಮ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು, ಅರೊಗ್ಯದ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ ಹೆಚ್ಚು ಹೆಚ್ಚು ಸಂಘಟನೆ ಮಾಡಲು ಸಾಧ್ಯವಾಗುತ್ತಿದೆ, ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಅನೇಕ ಮಹಿಳೆಯರು ಬಂಗಾರ ತೆಗೆದುಕೊಳ್ಳಲು, ಗ್ರಂಥಗಳನ್ನು ಖರೀದಿಸಲು ಮೊದಲಾದ ಕಾರ್ಯಗಳಿಗೆ ಬಳಕೆ ಮಾಡುತ್ತಿದ್ದಾರೆ, ಮ ಳೆಯರಗೆ ಆರ್ಥಿಕ ಸಬಲೀಕರಣದಲ್ಲಿ ಈ ಗೃಹ ಲಕ್ಷ್ಮಿ ಪ್ರಧಾನ ಪಾತ್ರ ವಹಿಸಿದೆ ಎಂದರು.
ಕೆಪಿಸಿಸಿ ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಸಂಯುಕ್ತಾ ಪಾಟೀಲ ಮಾತನಾಡಿ, ಇಂದು ಮಹಿಳೆ ಹಿಂದೆಂದಿಗಿಂತಲೂ ದೊಡ್ಡ ಸವಾಲು ಎದುರಿಸುತ್ತಿದ್ದಾಳೆ, ಪ್ರತಿ ನಿಮಿಷಕ್ಕೆ ಮಹಿಳೆ ಮೇಲೆ ದೌರ್ಜನ್ಯ ನಡೆಯುತ್ತಿದೆ, ಈ ಕಾಲಘಟ್ಟದಲ್ಲಿ ಮಹಿಳೆ ರಾಜಕೀಯವಾಗಿಯೂ ಪ್ರಬಲಗೊಳ್ಳಬೇಕು, ಇಂದಿಗೂ ಶಾಸನ ಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆ, ಮಹಿಳೆಗೆ ಈ ಪ್ರಾತಿನಿಧ್ಯ ದೊರಕಿದಾಗ ಮಾತ್ರ ಮಹಿಳಾ ಸಮಸ್ಯೆಗಳಿಗೆ ಕಡಿವಾಣ ಬೀಳಲು ಸಾಧ್ಯ, ಈ ನಿಟ್ಟಿನಲ್ಲಿ ಮಹಿಳೆಯರು ಮುಂಬರುವ ತಾ.ಪಂ, ಜಿ.ಪಂ. ಚುನಾವಣೆಗಳಲ್ಲಿ ಹೆಚ್ಚು ಹೆಚ್ಚು ಸ್ಪರ್ಧೆ ಮಾಡುವಂತಾಗಬೇಕು, ಶಾಸನ ಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಪ್ರಬಲಗೊಳ್ಳಬೇಕಿದೆ ಎಂದರು.
ನಿಕಟಪೂರ್ವ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ ಮಾತನಾಡಿ, ನೂತನ ಮಹಿಳಾ ಅಧ್ಯಕ್ಷರಿಗೆ ಸಂಪೂರ್ಣ ಸಹಕಾರ ನೀಡುವೆ ಎಂದರು.
ಪದಗ್ರಹಣ ಮಾಡಿದ ಮಹಿಳಾ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷೆ ರಮೀಜಾ ನದಾಫ್ ಮತನಾಡಿ, ಬಿಜೆಪಿ ವಿನಾಕಾರಣ ಸಮಾಜದಲ್ಲಿ ಅಶಾಂತಿ, ಕೋಮುವಾದ ಸೃಷ್ಟಿಸುತ್ತಿದೆ, ಅದರೆ ಕಾಂಗ್ರೆಸ್ ಸೇವೆಗೆ ಆದ್ಯತೆ ನೀಡಿದೆ, ಸಮಾಜದಲ್ಲಿ ಶಾಂತಿ ಕದಡದಂತೆ ನೋಡಿಕೊಳ್ಳುವ ಜವಾಬ್ದಾರಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲಿದೆ, ಪಕ್ಷ ಒಂದು ದೊಡ್ಡ ಜವಾಬ್ದಾರಿಯನ್ನು ನನಗೆ ವಹಿಸಿದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಯನ್ನು ಪರಿಣಾಮಕಾರಿಯಾಗಿ ಮಾಡುವ ಸಂಕಲ್ಪ ಮಾಡಿರುವೆ ಎಂದರು.
ಎಐಸಿಸಿಸಿ ಮಾಜಿ ಸದಸ್ಯೆ ಶ್ರೀದೇವಿ ಉತ್ಲಾಸರ, ಜಿ.ಪಂ. ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳೀಮನಿ, ಗೌರಮ್ಮ ಮುತ್ತತ್ತಿ, ಮಹಾದೇವಿ ಗೋಕಾಕ, ರುಕ್ಮೀಣಿ ಚವ್ಹಾಣ, ಭಾರತಿ ನಾವಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್, ಗಡಿನಾಡು ಅಭಿವೃದ್ಧಿ ಪ್ರಾದಿಕಾರದ ಮಾಜಿ ಅಧ್ಯಕ್ಷ ಸುಭಾಷ ಛಾಯಾಗೋಳ, ಡಾ.ಪ್ರಭುಗೌಡ ಪಾಟೀಲ ಲಿಂಗದಳ್ಳಿ, ಬಿ.ಆರ್. ಪಾಟೀಲ ಯಾಳಗಿ, ಬಷೀರ್ ಷೇಠ್, ಮೊಹ್ಮದ್ ರಪೀಕ್ ಟಪಾಲ್, ಮೊಹ್ಮದ್ ರಫೀಕ್ ಕಾಣೆ, ಜಮೀರ್ ಭಕ್ಷಿ, ಎಂ.ಸಿ. ಮುಲ್ಲಾ, ಉಸ್ಮಾನ್ ಪಟೇಲ್ ಕೊಲ್ಹಾರ, ಬಾಳನಗೌಡ ಪಾಟೀಲ, ಶಬ್ಬೀರ್ ಜಹಾಗೀರದಾರ, ವಸಂತ ಹೊನಮೋಡೆ ಇದ್ದರು.