ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಜಿಲ್ಲಾ ಪಂಚಾಯತ್ ಜಿಲ್ಲಾ ಸಂಪನ್ಮೂಲ ತರಬೇತಿ ಕೇಂದ್ರ (ಡಿಪಿಆರ್‌ಸಿ) ವಿಜಯಪುರದಲ್ಲಿ ಮೀನುಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಗ್ರಾಮ ಪಂಚಾಯಿತಿಗೆ ಒಳಪಡುವ ಕೆರೆಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಯೋಜನೆ ಅಡಿ ರಚಿಸಲಾದ ಒಕ್ಕೂಟಗಳ ಸ್ವಸಹಾಯ ಸಂಘದ ಮಹಿಳೆಯರಿಗೆ ಸಮಗ್ರ ಮೀನು ಸಾಕಾಣಿಕೆ ವಿಷಯದ ಕುರಿತು ೨ ದಿನಗಳ ಕಾಲ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಪ್ರಕಾಶ ವಡ್ಡರ ಮಾತನಾಡಿದರು.
“ಗ್ರಾಮೀಣ ಪ್ರದೇಶದ ಸ್ವಸಹಾಯ ಸಂಘದ ಮಹಿಳೆಯರ ಸಬಲೀಕರಣಕ್ಕಾಗಿ ವಿವಿಧ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಎನ್‌ಆರ್‌ಎಲ್‌ಎಂ ಯೋಜನೆ ಅಡಿ ಕೈಗೊಳ್ಳಲಾಗುತ್ತಿದ್ದು ಮತ್ಸ್ಯ ಸಂಜೀವಿನಿ ಯೋಜನೆ ಅಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೆರೆಗಳಲ್ಲಿ ಸ್ವಸಹಾಯ ಸಂಘದ ಮಹಿಳೆಯರು ಮೀನು ಸಾಕಾಣಿಕೆ ಮಾಡಲು ಆಸಕ್ತಿ ಮಹಿಳೆಯರಿಗೆ ತರಬೇತಿ ಆಯೋಜಿಸಲಾಗಿದ್ದು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ಹಾಗೂ ಮೀನು ಸಾಕಾಣಿಕೆ ಮಾಡಿ ಹೆಚ್ಚಿನ ಆದಾಯವನ್ನು ಪಡೆದುಕೊಳ್ಳಲು ತಿಳಿಸಿದರು.
ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಎಮ್.ಎಚ್. ಬಾಂಗಿ ಮಾತನಾಡಿ “ “ಮೀನು ಸಾಕಾಣಿಕೆ ಮಾಡಲು ಇಲಾಖೆಯಿಂದ ಸಬ್ಸಿಡಿ ರೂಪದಲ್ಲಿ ಮೀನುಗಳನ್ನು ನೀಡಲಾಗುತ್ತಿದ್ದು ಜಿಲ್ಲೆಯಲ್ಲಿ ಮೀನು ಸಾಕಾಣಿಕೆ ಮಾಡಿ ಆರ್ಥಿಕ ಇಳುವರಿ ಲಾಭ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಿರುವ ಅನೇಕ ಫಲಾನುಭವಿಗಳ ನಮ್ಮ ಜೊತೆ ಇದ್ದಾರೆ. ಆ ನಿಟ್ಟಿನಲ್ಲಿ ನಿಮಗೆ ಬೇಕಾದ ಎಲ್ಲಾ ರೀತಿಯ ಸಹಾಯ ಸಹಕಾರವನ್ನು ಇಲಾಖೆಯಿಂದ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ವಿಜಯಕುಮಾರ, ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಆರ್‌ಐಸಿ ಭೂತನಾಳ ರವರು ಮತ್ಸ್ಯ ಸಂಜೀವಿನಿ” ಯೋಜನೆಯ ಕುರಿತು ಸಮಗ್ರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರುಗಳಾದ ಶ್ರೀಶೈಲ್ ಎಸ್ ಗಂಗನಾಳ, ಜಿ ಎಸ್ ಬಿರಾದರ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ವಿಶ್ವನಾಥ ಶಹಾಪುರ, ಯುವ ವೃತ್ತಿಪರರಾದ ವಿಜಯಲಕ್ಷ್ಮಿ ವಿ ಪ್ರಧಾನಿ, ಸೌಪರ್ಣಿಕ ಕೊಪ್ಪಳ ಸೇರಿದಂತೆ ಇತರರು ಉಪಸ್ಥಿತರಿದ್ದರು.