ವಿಜಯಪುರದಲ್ಲಿ ಬಿಜೆಪಿ ಮುಖಂಡ ಡಾ.ಸುರೇಶ ಬಿರಾದಾರ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನೇರಿ ಶ್ರೀಗಳಿಗೆ ವಿಜಯಪುರ ಜಿಲ್ಲೆ ಪ್ರವೇಶ ನಿಷೇಧಿಸಿ ತಡೆಯಾಜ್ಞೆ ನೀಡಿರುವುದು ಖಂಡನೀಯ,
ಇದರ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದ್ದು, ಕೂಡಲೇ ಈ ನಿಷೇಧ ಆದೇಶವನ್ನು ಹಿಂಪಡೆದು, ಶ್ರೀಗಳ ಬಗ್ಗೆ ಅಗೌರವದಿಂದ ನಡೆದುಕೊಂಡಿರುವ ಕಾಂಗ್ರೆಸ್ ನಾಯಕರು ಕೂಡಲೇ ಶ್ರೀಗಳಿಗೆ ಕ್ಷಮೆ ಕೇಳಬೇಕು ಎಂದು ಬಿಜೆಪಿ ಮುಖಂಡ ಡಾ.ಸುರೇಶ ಬಿರಾದಾರ ಒತ್ತಾಯಿಸಿದರು.
ಲಿಂಗಾಯತ ಒಕ್ಕೂಟದ ಮಠಾಧೀಶರು ರಾಜ್ಯ ಸರ್ಕಾರದ ಮೂಲಕ ಕನೇರಿ ಶ್ರೀಗಳನ್ನು ಹತ್ತಿಕ್ಕುವ ಬದಲು ಬಹಿರಂಗ ಚರ್ಚೆಗೆ ಬರಬೇಕು, ವೇದಿಕೆಯಲ್ಲಿ ಕನೇರಿ ಶ್ರೀಗಳು ಭಾಗವಹಿಸುತ್ತಾರೆ, ಎಲ್ಲ ವಿಷಯಗಳು ಆ ವೇದಿಕೆಯಲ್ಲಿಯೇ ಸಮಗ್ರ ಚಿಂತನೆಯಾಗಲಿ ಎಂದು ಹೇಳಿದರು.
ನಾವೆಲ್ಲರೂ ಹಿಂದೂಗಳಾಗಿ ಇರೋಣ, ಭಿನ್ನಾಭಿಪ್ರಾಯ ಬಿಡೋಣ, ಈ ಬಗ್ಗೆ ಬಹಿರಂಗ ಚರ್ಚೆ ಮೂಲಕ ಸಿದ್ಧಾಂತ ಪ್ರತಿಪಾದಿಸೋಣ, ಜನ ಯಾರನ್ನು ಒಪ್ಪಿಕೊಳ್ಳುತ್ತಾರೋ ಒಪ್ಪಿಕೊಳ್ಳಲಿ ಎಂದರು.
ಬುದ್ದ, ಬಸವ, ಡಾ.ಅಂಬೇಡ್ಕರ್ ಅವರ ಚಿಂತನೆಗಳಿಂದ ವಿಮುಖರಾಗಿ ಹಿಂಸೆ ಪ್ರತಿಪಾದಿಸುವ ಕಾರ್ಲಮಾರ್ಕ್ಸ ಸಿದ್ಧಾಂತದತ್ತ ವಾಲಿದ್ದಾರೆ, ಭಾರತೀಯ ಸಂವಿಧಾನವನ್ನು ವಿರೋಧಿಸಿದ್ದೆ ಈ ಕಮ್ಯೂನಿಸ್ಟರು ಎಂದರು.
ಎಂದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯೋ ಆಗ ಲಿಂಗಾಯತರನ್ನು ಒಡೆಯುವ ಕಾರ್ಯಕ್ಕೆ ಕೈ ಹಾಕಿದೆ, ಕಳೆದ ಬಾರಿ ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಯ ವಿಷಯವಾಗಿ ಆಂದೋಲನ ಮಾಡಿ ಅಧಿಕಾರಕ್ಕೆ ಬಂದು ೨೪ ಗಂಟೆಯಲ್ಲಿ ಪ್ರತ್ಯೇಕ ಧರ್ಮ ಮಾನ್ಯತೆ ನೀಡುವುದಾಗಿ ಹೇಳಿತ್ತು, ಈಗ ಏನಾಯ್ತು? ಎಂದು ಪ್ರಶ್ನಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ಗೋಪಾಲ ಘಟಕಾಂಬಳೆ, ಉಮೇಶ ವಂದಾಲ, ಭೀಮಾಶಂಕರ ಹದನೂರ, ಮಹೇಂದ್ರ ನಾಯಕ, ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಎರಡನೇಯ ಜಿನ್ನಾ ಆಗಬೇಡಿ !
ಲಿಂಗಾಯತ ಒಕ್ಕೂಟದ ಮಠಾಧೀಶರೊಂದಿಗೆ ಸೇರಿ ಜಿಲ್ಲಾ ಉಸ್ತುವಾರಿ ಸಚಿವರು ಲಿಂಗಾಯತ – ವೀರಶೈವ ಧರ್ಮಾಧಾರಿತ ವಿಭಜನೆಗೆ ಅವಕಾಶ ನೀಡುವ ಮೂಲಕ ಎರಡನೇಯ ಜಿನ್ನಾ ಆಗಲು ಹೊರಟಿರುವುದು ಸರಿಯಲ್ಲ. ಉಸ್ತುವಾರಿ ಸಚಿವರು ಕೂಡಲೇ ಕನೇರಿ ಶ್ರೀಗಳಿಗೆ ವಿಧಿಸಿದ ದಿಗ್ಭಂಧನ ತೆಗೆಸಬೇಕು ಎಂದು ಸುರೇಶ ಬಿರಾದಾರ ಆಗ್ರಹಿಸಿದರು.

ಕನೇರಿ ಶ್ರೀಗಳ ಕೀಳುಮಟ್ಟದ ಭಾಷೆಗೆ ಪ್ರತಿಕ್ರಿಯಿಸದ ನಾಯಕರು
ಸಾರ್ವಜನಿಕ ವೇದಿಕೆಯಲ್ಲಿ ಕನೇರಿ ಶ್ರೀಗಳು ತೀರ ಕೀಳುಮಟ್ಟದ ಭಾಷೆ ಬಳಸಿದ್ದು ಎಷ್ಟರ ಮಟ್ಟಿಗೆ ಸರಿ? ಎಂಬ ಪತ್ರಕರ್ತರ ಪ್ರಶ್ನೆಗೆ ಅಲ್ಲಿದ್ದ ಎಲ್ಲ ಬಿಜೆಪಿ ನಾಯಕರ ಬಳಿ ಉತ್ತರವಿರಲಿಲ್ಲ. ಶ್ರೀಗಳ ಮಾತು ಸಮರ್ಥಿಸಲೂ ಆಗದೇ, ಖಂಡಿಸಲೂ ಆಗದೇ ಪೇಚಿಗೆ ಸಿಲುಕಿದರು.
ಆಗ ಮಧ್ಯೆ ಪ್ರವೇಶಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅವರು, ಇದು ಹಿಂದೂಗಳ ನಡುವೆ ಇರುವ ಕಲಹ. ಇದರಲ್ಲಿ ಕಾಂಗ್ರೆಸ್ ಯಾಕೆ ಮಧ್ಯೆ ಪ್ರವೇಶಿಸಬೇಕು ತಾವಾಡಿದ ಕಟು ಶಬ್ದಗಳಿಗೆ ಸ್ವತ: ಕನೇರಿ ಶ್ರೀಗಳೇ ಸ್ಪಷ್ಟನೆ ಕೊಡುತ್ತಾರೆ ಎನ್ನುವ ಮೂಲಕ ಈ ಚರ್ಚೆಗೆ ತೆರೆ ಎಳೆದರು.