ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾರತ ಶ್ರೀಮಂತ ಸಂಸ್ಕೃತಿ ಪೋಷಿಸುತ್ತ ಸಾರ್ವತ್ರಿಕ ಮೌಲ್ಯಗಳನ್ನು ಜಗತ್ತಿಗೆ ಬಿತ್ತರಿಸುತ್ತಿದೆ. ಅಂತಹ ಮೌಲ್ಯಾಧಾರಿತ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಲು ಇಂದಿನ ಯುವ ಜನಾಂಗ ಹಿಂದೆಟು ಹಾಕುತ್ತಿರುವುದು ವಿಷಾದನೀಯ ಸಂಗತಿ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತರ ಫೆಡರೇಶನದ ರಾಷ್ಟ್ರೀಯ ಅಧ್ಯಕ್ಷ ಡಾ.ಜಾವೀದ ಜಮಾದಾರ ಹೇಳಿದರು.
ನಗರದ ಬಿ.ಎಲ್.ಡಿ.ಈ. ಅಸೋಶಿಯೇಶನ್ ಎ.ವಿ.ಎಫ್. ಆಯುರ್ವೇದ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ನೆಹರು ಯುವ ಕೇಂದ್ರ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ ೨೦೨೫ನೇ ಸಾಲಿನ ವಿಜಯಪುರ ಜಿಲ್ಲಾ ಮಟ್ಟದ ಯುವಜನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪಾಶ್ಚಾತ್ಯ ಸಂಸ್ಕೃತಿಯ ಅತಿಯಾದ ವ್ಯಾಮೋಹದಿಂದ ಯುವಜನತೆ ನಮ್ಮ ಸಂಸ್ಕೃತಿಯ ಬಗ್ಗೆ ಒಲವು ಬೆಳೆಸಿಕೊಳ್ಳುತ್ತಿಲ್ಲ. ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಣೆ ಮಾಡುವದಕ್ಕಿಂತ ನಮ್ಮ ನೆಲದ ಭವ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಲು ಪ್ರತಿಯೊಬ್ಬರು ಪಣತೊಡಬೇಕಾಗಿದೆ. ಜನಪದ ಕಲೆಗಳು ಮಾನವೀಯ ಸಂಬಂಧದ ಸರಪಳಿ ಜಾನಪದ ಕಲೆ ನಮ್ಮ ಪೂರ್ವಜರು ನೀಡಿದ ಅನುಪಮ ಕೊಡುಗೆ, ಯುವಜನರು ಕಲೆ, ಸಾಹಿತ್ಯ ಆರಾಧಕರಾಗಿರಬೇಕು. ಹಾಗೂ ಸಾಂಸ್ಕೃತಿಕ ರಾಯಭಾರಿಗಳಾಗಿ ತನ್ಮೂಲಕ ದೇಶದ ಕೀರ್ತಿ ಬೆಳೆಸಬೇಕೆಂದರು.
ಅತಿಥಿಗಳಾಗಿ ಮಾತನಾಡಿದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಅರವಿಂದ ಕೊಪ್ಪ,
ಬದಲಾದ ಜೀವನ ಶೈಲಿ ಒತ್ತಡಗಳಿಂದ ಜೀವನ ಮೌಲ್ಯಗಳು ಅಪಾಯದ ಅಂಚಿಗೆ ಸರಿಯುತ್ತಿದೆ. ಯುವಜನರು ಸಾಂಸ್ಕೃತಿಕವಾಗಿ ವಿಮುಖರಾಗಬಾರದೆಂದರು.
ಸಮಾರಂಭದ ಅಧ್ಯಕ್ಷತೆಯನ್ನು ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಅಶೋಕ ಪಾಟೀಲ ಮಾತನಾಡುತ್ತ ನಮ್ಮ ಸಂಸ್ಕೃತಿ ಬಗ್ಗೆ ಒಲವು ಬೆಳೆಸಿಕೊಳ್ಳಬೇಕು. ಜನಪದ ಕಲಿಕೆಗಾಗಿ ಹೆಚ್ಚಿನ ಒತ್ತನ್ನು ನೀಡಬೇಕಾಗಿದೆ. ಯುವಕರಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ, ಕ್ರೀಡೆ, ಜೀವನ ಮೌಲ್ಯಗಳ ಬಗ್ಗೆ ಹೆಚ್ಚಿನ ಒತ್ತನ್ನು ನೀಡಬೇಕಾಗಿದೆ. ಶಾಲಾ ಕಾಲೇಜುಗಳಲ್ಲಿ ನಮ್ಮ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸಂಜು ಕೋತ, ಎಕ್ಸಲೆಂಟ್ ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ, ಡಾ. ಡಿ.ಎನ್. ಧರಿ ಉಪಸ್ಥಿತರಿದ್ದರು. ವಿಜಯಪುರ ನಗರ ಹಾಗೂ ಜಿಲ್ಲೆಯಿಂದ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಪ್ರಾಚಾರ್ಯರು ಹಾಗೂ ಕ್ರೀಡಾ ತರಬೇತುದಾರರು ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಜಾನಪದ ನೃತ್ಯದ ಸ್ಪರ್ಧೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಚೇರಿ ಅಧ್ಯಕ್ಷರು ಸಿಬ್ಬಂದಿ ವರ್ಗದವರು ಕೋಚ್ ರವರು ಮಾರ್ಕರ್ ಉಪಸ್ಥಿತರಿದ್ದರು