ಉದಯರಶ್ಮಿ ದಿನಪತ್ರಿಕೆ
ಇಂಡಿ: ಅತಿವೃಷ್ಠಿಯಿಂದ ಹಾಗೂ ಭೀಮಾನದಿ ಪ್ರವಾಹದಿಂದ ಇಂಡಿ ತಾಲೂಕಿನ ಎಲ್ಲ ರೈತರ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಸಂಪೂರ್ಣ ಹಾಳಾಗಿದ್ದು ಕೂಡಲೆ ಸರಕಾರ ೧ ಎಕರೆ ಕೃಷಿ ಇಲಾಖಾ ಬೆಳೆಗೆ ೨೫ ಸಾವಿರ ಹಾಗೂ ತೋಟಗಾರಿಕೆ ಇಲಾಖೆ ಬೆಳೆಗೆ ೫೦ ಸಾವಿರ ರೂಪಾಯಿ ನಿಗದಿ ಮಾಡಿ ಸಮಯ ವ್ಯರ್ಥ ಮಾಡದೆ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಬೇಕೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಂಕರಗೌಡ ಪಾಟೀಲ (ಡೋಮನಾಳ) ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಸರ್ವೇ ಮಾಡಿಸುತ್ತಿರುವುದಾಗಿ ಪರಿಹಾರ ವಿಳಂಬ ಮಾಡುತ್ತಿದೆ. ಈಗಾಗಲೆ ರೈತರ ಪಹಣಿಯಲ್ಲಿ ಯಾವ ಬೆಳೆ ಇದೆ ಎಂಬ ಬಗ್ಗೆ ಉಲ್ಲೇಖವಿದೆ. ಆ ಪಹಣಿಯಲ್ಲಿನ ಬೆಳೆ ಅನ್ವಯ ಪರಿಹಾರ ನೀಡಬೇಕು. ರೈತರು ಸಂಪೂರ್ಣ ಸಂಕಷ್ಟದಲ್ಲಿದ್ದು ನೀವು ಈಗ ನಿಗದಿ ಮಾಡಿರುವ ಪರಿಹಾರ ರೈತರಿಗೆ ತೃಪ್ತಿ ತರುತ್ತಿಲ್ಲ. ಕೂಡಲೆ ಇನ್ನಷ್ಟು ಹೆಚ್ಚಿನ ಪರಿಹಾರ ನಿಗದಿ ಮಾಡಿ ರೈತರ ಖಾತೆಗಳಿಗೆ ನೇರ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.
ಗ್ರಾಮೀಣ ಭಾಗದಲ್ಲಿ ಎಲ್ಲ ರಸ್ತೆಗಳು ಹಾಳಾಗಿದ್ದು, ಕೂಡಲೆ ಸರಕಾರ ಎಲ್ಲ ರಸ್ತೆಗಳನ್ನು ಪುನರ್ ನಿರ್ಮಾಣ ಮಾಡಬೇಕು. ಗ್ರಾಮೀಣ ಜನರ ಬದುಕು ರಸ್ತೆಗಳು ಕೆಟ್ಟಿದ್ದರಿಂದ ದುಸ್ಥರವಾದಂತಾಗಿದೆ. ವಾಹನಗಳು ಪದೇ-ಪದೇ ರಿಪೇರಿಗೆ ಬರುತ್ತಿವೆ. ಮಳೆಯಿಂದ ಹಲವು ಬ್ರಿಡ್ಜ್ಗಳು ಹಾನಿಯಾಗಿದ್ದು ಎಲ್ಲ ಬ್ರಿಡ್ಜಗಳನ್ನು ಸಹ ಪುನರ್ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.