ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಗವಾಯಿ ಮೇಲೆ ವಕೀಲ ರಾಕೇಶ ಶೂ ಎಸೆಯಲು ಪ್ರಯತ್ನಿಸಿದ ಪ್ರಕರಣ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸರ್ವೋಚ್ಛ ನ್ಯಾಯಾಲಯದಲ್ಲಿ, ಕಲಾಪ ವೇಳೆ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಅವರ ಮೇಲೆ ಹಿರಿಯ ವಕೀಲ ರಾಕೇಶ ಕಿಶೋರ ಅವರು ಶೂ ಎಸೆಯಲು ಪ್ರಯತ್ನಿಸಿರುವದನ್ನು ಇಲ್ಲಿನ ನ್ಯಾಯವಾದಿಗಳ ಸಂಘ ತೀವ್ರವಾಗಿ ಖಂಡಿಸಿ ತಪ್ಪಿತಸ್ಥ ವಕೀಲನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಇಲ್ಲಿನ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿ, ಸಮಾಜ ನ್ಯಾಯಾಲಯದ ಮೇಲೆ, ನ್ಯಾಯಾಧೀಶರ ಮೇಲೆ, ನ್ಯಾಯವಾದಿಗಳ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದು, ಈ ಘಟನೆ ದೇಶದ ನ್ಯಾಯಾಂಗ ವ್ಯವಸ್ಥೆಗೆ ಮತ್ತು ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ. ಹಿರಿಯ ವಕೀಲರಾದ ಇವರಿಗೆ ತೆರೆದ ನ್ಯಾಯಾಲಯದಲ್ಲಿ ಹೇಗಿರಬೇಕು ಎನ್ನುವ ಕನಿಷ್ಟ ಸೌಜನ್ಯವೂ ಇಲ್ಲದಿರುವದು ವಿಪರ್ಯಾಸ. ಅಲ್ಲದೇ ಈ ಕೃತ್ಯ ವಕೀಲರ ಸಮುದಾಯಕ್ಕೆ ಅಪವಾದ ತಂದಂತಿದೆ. ಕಾರಣ ತಪ್ಪಿತಸ್ಥ ವಕೀಲನನ್ನು ವೃತ್ತಿಯಿಂದ ಸಪೂರ್ಣವಾಗಿ ತೆಗೆದುಹಾಕಬೇಕು ಎಂದರು.
ಈ ವೇಳೆ ಹಿರಿಯ ನ್ಯಾಯವಾದಿ ಎನ್.ಆರ್.ಮೊಕಾಶಿ ಮಾತನಾಡಿ, ಈ ಘಟನೆ ಕೇವಲ ನ್ಯಾಯಾಧೀಶರ ಮೇಲೆ ನಡೆದಿದ್ದಲ್ಲ, ಇಡೀ ಸಮಾಜದ ಮೇಲೆ ನಡೆದ ದಾಳಿ. ಈ ಘಟನೆಯ ತಪ್ಪಿತಸ್ಥರ ಮೇಲೆ ಕ್ರಮವಾಗುವವರೆಗೂ ನಮ್ಮ ಹೋರಾಟ ನಿಲ್ಲುವದಿಲ್ಲ ಎಂದರು.
ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಬಿ.ಗೌಡರ, ಹಿರಿಯ ನ್ಯಾಯವಾದಿಗಳಾದ ಎಸ್.ಬಿ.ಬಾಚೀಹಾಳ, ಎಂ.ಆರ್.ಪಾಟೀಲ, ನ್ಯಾಯವಾದಿಗಳಾದ ನಾಗನಗೌಡ ಪಾಟೀಲ, ಜಡ್.ಕೆ.ಚಿತ್ತರಗಿ, ಚೇತನ ಶಿವಶಿಂಪಿ, ಎನ್.ಆರ್.ಗುರಿಕಾರ್, ಎಂ.ಎಲ್.ರಿಸಾಲದಾರ, ಎಂ.ಬಿ.ಹೊಸಮನಿ, ಆರ್.ಎಚ್.ಇನಾಮದಾರ, ಎಚ್.ಕೆ.ವಾಲಿಕಾರ್, ಎಂ.ಆರ್.ಮುಜಾವರ, ಎಫ್.ಆರ್.ಕುಂಟೋಜಿ, ಮಾರುತಿ ಬೋವಿ, ಸಂತೋಷ ನಾಯಕ್, ಕೆ.ಬಿ.ದೊಡಮನಿ, ಆರ್.ಎ.ಸಾಲಿ ಇದ್ದರು.

