ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಕ್ಷರ ದಾಸೋಹ ಯೋಜನೆಯಡಿ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿ ಊಟಕ್ಕೆ ಮಕ್ಕಳಿಗೆ ಎಣ್ಣೆ, ತೊಗರಿಬೇಳೆ ವಿತರಿಸಬೇಕು. ಮೊಟ್ಟೆಗಳ ಖರೀದಿ ಮೊತ್ತ ಹೆಚ್ಚಳವಾಗಿದ್ದು, ದರ ಮರುನಿಗದಿಪಡಿಸಬೇಕೆಂದು ಆಗ್ರಹಿಸಿ ಜಿಲ್ಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಜಿಲ್ಲಾ ಪಂಚಾಯತಿ ಸಿಇಓ ರಿಷಿ ಆನಂದ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಅರ್ಜುನ ಲಮಾಣಿ, ಶೈಕ್ಷಣಿಕ ವರ್ಷ ಆರಂಭವಾಗಿ ಜೂನ ತಿಂಗಳು ಮುಗಿಯುತ್ತಾ ಬಂದರೂ ಶಾಲೆಗಳಿಗೆ ಬೇಳೆ ಹಾಗೂ ಎಣ್ಣೆ ಪೂರೈಕೆಯಾಗಿಲ್ಲ. ಮುಖ್ಯಗುರುಗಳು ಬೇಳೆ ಹಾಗೂ ಎಣ್ಣೆ ಸಹ ಅಂಗಡಿ ಮೂಲಕ ಖರೀದಿಸುತ್ತಾ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೇಜಿ ಎಣ್ಣೆಗೆ ೧೮೦ರೂ. ಕೇಜಿ ಬೇಳೆಗೆ ೧೨೦ರೂ. ರಂತೆ ಮುಖ್ಯಗುರುಗಳು ಖರೀದಿಸುತ್ತಿದ್ದಾರೆ.
ಇನ್ನು ಪ್ರಸ್ತುತ ಒಂದು ಮೊಟ್ಟೆಯ ಬೆಲೆ ೮ರೂ ಇದೆ. ಸರ್ಕಾರ ಪ್ರತಿ ಮೊಟ್ಟೆಗೆ ೬ರೂ. ಮಾತ್ರ ಅನುದಾನ ಮಾತ್ರ ನೀಡುತ್ತಿದೆ. ಇದರಿಂದ ಪ್ರತಿ ಮೊಟ್ಟೆಗೆ ಸುಮಾರು ೨ರೂ. ಹೆಚ್ಚುವರಿ ವೆಚ್ಚವಾಗುತ್ತಿದ್ದು, ಈ ಹೆಚ್ಚುವರಿ ಮೊತ್ತವನ್ನು ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಸ್ವಂತ ಜೇಬಿನಿಂದ ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಇಂತಹ ಪರಿಸ್ಥಿತಿಯಿಂದ ಮಧ್ಯಾಹ್ನ ಬಿಸಿ ಊಟ ಯೋಜನೆಯ ಸಮರ್ಪಕ ನಿರ್ವಹಣೆ ಕಷ್ಟವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಅನುದಾನವನ್ನು ತಕ್ಷಣ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಹಣಮಂತ ಕೊಣದಿ, ನಗರವಲಯ ಶಿಕ್ಷಕರ ಸಂಘದ ಅಧ್ಯಕ್ಷ ಜುಬೇರ ಕೆರೂರ ಇದ್ದರು.

