ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪ್ರಜಾಪ್ರಭುತ್ವದ ಬಲವರ್ಧನೆಗೆ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಯಶಸ್ವಿಗೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ ಹೇಳಿದರು.
ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಗುರುವಾರ ಜರುಗಿದ ಬಿಎಲ್‌ಎ ನೇಮಕ ಹಾಗೂ ವಿಶೇಷ ತರಬೇತಿ ಕಾರ್ಯದಲ್ಲಿ ಮಹಾಶಕ್ತಿ ಕೇಂದ್ರದ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.
ಬಿಜೆಪಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಮನೆಮನೆಗೆ ತೆರಳಿ ಎಸ್‌ಐಆರ್ ಕಾರ್ಯಕ್ಕೆ ಸಹಕಾರ ನೀಡಬೇಕು. ಮ್ಯಾಪಿಂಗ್ ಕಾರ್ಯದಲ್ಲಿ ಮತದಾರರಿಗೆ ಸಹಾಯ ಮಾಡಬೇಕು. ಒಂದು ತಿಂಗಳು ಕಾಲ ನಡೆಯುವ ನಿರಂತರ ಪರಿಷ್ಕರಣೆ ಕಾರ್ಯದಲ್ಲಿ ಚುನಾವಣಾ ಆಯೋಗ ನೇಮಿಸಿದ ಬೂತ್ ಮಟ್ಟದ ಅಧಿಕಾರಿಗಳಿಗೆ(ಬಿಎಲ್‌ಓ) ಎಲ್ಲ ರೀತಿಯ ಸಹಕಾರ ನೀಡಬೇಕು ಎಂದರು.
ಬಿಜೆಪಿ ಘಟಕದ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ) ಮಾತನಾಡಿ, ಅರ್ಹ ಮತದಾರ ಮತದಾನದಿಂದ ವಂಚಿತನಾಗಬಾರದು. ಪ್ರತಿಯೊಬ್ಬರು ಮತದಾರ ಪಟ್ಟಿಯಲ್ಲಿರುವಂತೆ ಕ್ರಮ ವಹಿಸಲು ಕಾರ್ಯ ನಿರ್ವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ಮತದಾರರನ್ನು ಭೇಟಿ ಮಾಡಿ ವಿಶೇಷ ಪರಿಷ್ಕರಣೆ ಕುರಿತು ಜಾಗೃತಿ ಮೂಡಿಸಲಾಯಿತು.
ಮಹಾಶಕ್ತಿಕೇಂದ್ರದ ಅಧ್ಯಕ್ಷ ಬಸವರಾಜ ಕಲ್ಲೂರ, ಪ್ರಕಾಶ ದೊಡಮನಿ, ಶಂಕರಗೌಡ ಕೊಕಟನೂರ, ಮಹಾಂತೇಶ ನಾಗರಳ್ಳಿ, ಶಶಿಕಾಂತ ಹಿರೇಮಠ, ಶಿವಾನಂದ ಬಸರಕೋಡ, ಸುರೇಶ ಇಂಗಳಗಿ, ಸುರೇಶ ಬಿರಾದಾರ, ರಾಯಗೊಂಡ ಬಿರಾದಾರ, ಮಲ್ಲು ಪೋಲೇಶಿ, ಪ್ರಕಾಶ ನಾಯ್ಕೋಡಿ ಇದ್ದರು.

