ಕುಡಿಯುವ ನೀರಿನ ಸಮಸ್ಯೆ ಕುರಿತು ನಡೆದ ಟಾಸ್ಕಫೋರ್ಸ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ್ ಅಧಿಕಾರಿಗಳಿಗೆ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಮತಕ್ಷೇತ್ರದ ಯಾವುದೇ ಗ್ರಾಮದಲ್ಲೂ ಕುಡಿಯುವ ನೀರಿನ ತೊಂದರೆ ಉಂಟಾಗಬಾರದು. ಒಂದು ವೇಳೆ ನೀರಿನ ಸಮಸ್ಯೆ ತಲೆದೋರಿದರೆ ಅದಕ್ಕೆ ಸಂಬಂಧಪಟ್ಟ ಪಿಡಿಓಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು,” ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅವರು ನಗರದ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಕುರಿತು ನಡೆದ ಟಾಸ್ಕಫೋರ್ಸ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ನೀರಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತಲೆದೋರಿದರೆ ಗ್ರಾಮ ಪಂಚಾಯತ್ ಪಿಡಿಓ ಹಾಗೂ ನೋಡೆಲ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ನೀರಿನ ಮೂಲಗಳು ಬತ್ತಿ ಹೋಗಿದ್ದರೆ, ತಕ್ಷಣವೇ ಗ್ರಾಮೀಣ ಭಾಗದ ಖಾಸಗಿ ಜಮೀನುಗಳನ್ನು ಅಥವಾ ರೈತರ ನೀರಾವರಿ ಮೂಲಗಳನ್ನು ಗುರುತಿಸಬೇಕು. ಗುರುತಿಸಲಾದ ಖಾಸಗಿ ನೀರಿನ ಮೂಲಗಳಿಂದ ಬಾಡಿಗೆ ರೂಪದಲ್ಲಿ ನೀರನ್ನು ಪಡೆದು, ತಕ್ಷಣವೇ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಬೇಕು. ಅವಶ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಿ ಎಂದು ತಿಳಿಸಿದರು.
ಪ್ರತೀ ಸೋಮವಾರ ಅಧಿಕಾರಿಗಳು ಟಾಸ್ಕಫೋರ್ಸ ಸಭೆ ನಡೆಸಿ ಗ್ರಾಮ ಆಡಳಿತ ಅಧಿಕಾರಿಗಳಯ ಸಹ ಗ್ರಾ.ಪಂ ಅಧಿಕಾರಿಗಳೊಂದಿಗೆ ಕೈ ಜೋಡಿಸಿ ವಾಸ್ತವವಾಗಿ ಎಲ್ಲಿ ಸಮಸ್ಯೆ ಇದೆ ಎಂಬುದನ್ನು ಕಂಡುಕೊಂಡು ಪ್ರತೀ ವಾರ ಸಭೆಗೆ ತಿಳಿಸಬೇಕೆಂದು ಶಾಸಕರು ಸೂಚಿಸಿದರು.
ತೆಗ್ಗೆಳ್ಳಿ ಗ್ರಾಮದಲ್ಲಿ ನೀರಿನ ಸಮಸ್ಯೆ ಇತ್ತು. ಈಗ ಏನಾಗಿದೆ ಎಂದು ಶಾಸಕರು ಪ್ರಶ್ನಿಸುತ್ತಿದ್ದಂತೆ ಉತ್ತರಿಸಿದ ತಾ.ಪಂ ಇಓ ಮಹಾದೇವಪ್ಪ ಏವೂರ ಈಗಾಗಲೆ ಗ್ರಾಮದಲ್ಲಿ ಒಂದು ಬೋರವೆಲ್ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಲಾಗಿದೆ ಎಂದು ತಿಳಿಸಿದರು.
ತಾಲೂಕಿನ ಯಾವುದೇ ವಸತಿ ನಿಲಯ, ಸರಕಾರಿ ಶಾಲಾ ಕಾಲೇಜುಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದAತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಹೊರ್ತಿ ಗ್ರಾಮದ ಮುರಾರ್ಜಿ ದೇಸಾಯಿ ಬಾಲಕರ ವಸತಿ ನಿಲಯದಲ್ಲಿ ನೀರಿನ ಸಮಸ್ಯೆ ಇದೆ. ಅದನ್ನು ಕೂಡಲೆ ಪರಿಹರಿಸಿ, ತೊಂದರೆ ನೀಗಿಸಲು ಏನು ಅವಶ್ಯಕತೆ ಇದೆ ಎಂಬುದನ್ನು ತಿಳಿದುಕೊಂಡು ಒಂದು ಅಂದಾಜು ಪತ್ರಿಕೆ ಸಿಧ್ಧಪಡಿಸಿ ಅಲ್ಲಿ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಯೋಜನೆ ರೂಪಿಸಿ ಎಂದು ತಾಲೂಕಾ ಪಂಚಾಯತ್ ಇಓ ಹಾಗೂ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ವೇದಿಕೆಯಲ್ಲಿ ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ, ತಾ.ಪಂ ಇಓ ಮಹಾದೇವಪ್ಪ ಏವೂರ ಇದ್ದರು.
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಸ್.ಆರ್. ಬಂಡಿ, ಕೆಬಿಜೆಎನ್‌ಎಲ್ ಅಧಿಕಾರಿ ಗೋವಿಂದ ರಾಠೋಡ, ಜಿ.ಪಂ. ಅಧಿಕಾರಿ ಶಿವಾಜಿ ಬನಸೋಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್. ನಡಗಡ್ಡಿ, ಎಸ್.ಆರ್ ಮೇಡೇದಾರ, ರಾಜೇಶ ಹೂಗಾರ, ಉಮೇಶ ಲಮಾಣಿ, ಎಸ್.ಆರ್. ಗದ್ಯಾಳ, ಮಂಜುನಾಥ ಧೂಳೆ, ದಯಾನಂದ ಮಠ, ಪ್ರದೀಪ ಭಿಸೆ, ಸೇರಿದಂತೆ ಇನ್ನಿತರರು ಇದ್ದರು.

