ಉದಯರಶ್ಮಿ ದಿನಪತ್ರಿಕೆ
ಚಡಚಣ: ಮೊಹರಂ ಉತ್ತರ ಕರ್ನಾಟಕ ಭಾಗದಲ್ಲಿ ಭಾವೈಕ್ಯತೆಯ ಸೇತುವೆಯಾಗಿದೆ. ಮುಸ್ಲಿಮರ ಹೊಸ ವರ್ಷದ ಹಬ್ಬ ಮೊಹರಂ. ಮೊಹರಂ ಇಲ್ಲಿ ಕೇವಲ ಮುಸ್ಲಿಂ ಬಾಂಧವರ ಹಬ್ಬವಾಗಿರದೇ ಹಿಂದೂ ಮುಸಲ್ಮಾನರು ಒಟ್ಟಾಗಿ ಮೊಹರಂ ಆಚರಿಸಿ ಭಾವೈಕ್ಯತೆಯ ಹಬ್ಬವನ್ನಾಗಿ ಮಾಡಿದ್ದಾರೆ.
ಮೊಹರಂದ ಕೊನೆಯ ದಿನವಾದ ಶುಕ್ರವಾರದಂದು ನಸುಕಿನ ಜಾವ ೫ ಗಂಟೆಗೆ ರೇವತಗಾಂವ ಗ್ರಾಮದಲ್ಲಿ ಹಸೇನ್ ಹಾಗೂ ಹುಸೇನ್ ದೇವರು ಬೇಬಿ ಫಾತೀಮಾ ದೇವರ ಡೋಲಿಯೊಂದಿಗೆ ಸಂಪ್ರದಾಯದ ಪ್ರಕಾರ ಗ್ರಾಮದ ಅಣ್ಣಾರಾಯ ಸಿದ್ಧನಗೌಡ ಪಾಟೀಲರ ಮನೆಗೆ ಭೇಟಿ ನೀಡಿ ಆದರಾತಿಥ್ಯವನ್ನು ಸ್ವೀಕರಿಸಿದ ನಂತರ ಲಾಲಸಾಬ ದೇವರ ಡೋಲಿಯನ್ನು ಮಸೀದಿಯಲ್ಲಿ ಕುಳ್ಳರಿಸಿ ನಂತರ ಗ್ರಾಮದ ಎಲ್ಲ ಭಕ್ತರ ಮನೆ ಮನೆಗಳಿಗೆ ಹಸೇನ್-ಹುಸೇನ್ ದೇವರು ಭೇಟಿ ನೀಡಿ ಪೂಜೆಯನ್ನು ಸ್ವೀಕರಿಸಿ ಮಸೀದಿಗೆ ಮರುಳಿದರು.
ನಂತರ ಸಾಯಂಕಾಲ ೪ ಗಂಟೆಗೆ ಭಕ್ತರಿಂದ ಚೌಂಕಿ ನೇವೈದ್ಯ ಅರ್ಪಿಸಲಾಯಿತು. ಸಾಯಂಕಾಲ ೪:೩೦ ಗಂಟೆಗೆ ಕರಬಲ್ ರಿವಾಯತ್ ಪದಗಳು ಮತ್ತು ಕರಬಲ್ ಆಟಗಳು, ಕರಡಿ ಕುಣಿತ ಜರುಗಿದವು. ಸಾಯಂಕಾಲ ೫ ಗಂಟೆಗೆ ಹಸನ್ ಹಾಗೂ ಹುಸೇನ್ ದೇವರು ಗ್ರಾಮದ ಭಕ್ತರ ಮನೆ ಮನೆಗೆ ತೆರಳಿ ದರ್ಶನ ನೀಡಿದರು.
೬ ಗಂಟೆಗೆ ಹಸೇನ್-ಹುಸೇನ್ ದೇವರ ಭೇಟಿ, ಡೋಲಿ ಭೇಟಿ ಕಾರ್ಯಕ್ರಮ ನಡೆಯಿತು. ಈ ವೇಳೆ ಕೆಲವು ಭಕ್ತರು ಕಟ್ಟಿಕೊಂಡಿದ್ದ ಲಾಡಿಗಳನ್ನು ಡೋಲಿಯ ಮೇಲೆ ಎಸೆದರೆ ಇನ್ನೂ ಕೆಲವರು ಚುರುಮುರಿ, ಶೇಂಗಾ, ಖಾರೀಕ್, ಬದಾಮ ಸೇರಿದಂತೆ ಇತರ ತಿನಿಸುಗಳನ್ನು ಎಸೆದು ತಮ್ಮ ಹರಕೆಯನ್ನು ತೀರಿಸಿದರು. ರಾತ್ರಿ ೭:೩೦ಕ್ಕೆ ದೇವರ ದಫನ್ ಕಾರ್ಯ ನಡೆಯಿತು.

