ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇವರು ನನಗೆ ದೃಷ್ಠಿ ಕೊಟ್ಟಿದ್ದರೆ ಬಹುಶಃ ಇಂತಹ ಸಾಧನೆ ಮಾಡುವ ಧೈರ್ಯ ಮಾಡುತ್ತಿರಲಿಲ್ಲ. ನಮ್ಮಲ್ಲಿರುವ ಸಮಸ್ಯೆಗಳು ನಮ್ಮ ಸಾಧನೆಗೆ ಪೂರಕವಾಗಬೇಕೆ ಹೊರತು ಮಾರಕವಾಗಬಾರದು. ಸಾಧನೆ ಮಾಡುವ ಮನಸಿದ್ದರೆ ಸರ್ವ ಸಿದ್ಧಿಯಾಗುತ್ತದೆ ಎಂದು ಮಾನವ ಕಂಪ್ಯೂಟರ್ ಖ್ಯಾತಿಯ ಬಸವರಾಜ ಉಮರಾಣಿ ಹೇಳಿದರು.
ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದ ಅವರು; ಗಣಿತ ಎನ್ನುವುದು ಹಲವರಿಗೆ ಕಬ್ಬಿಣದ ಕಡಲೆಯಾದರೆ ಕೆಲವರಿಗೆ ಅದು ಎಲ್ಲದಕ್ಕಿಂತಲೂ ಸಾಮಾನ್ಯವಾದ ವಿಷಯವಾಗಿ ಕಾಣುತ್ತದೆ. ಅದಕ್ಕೆ ಕಾರಣ ಆ ವಿಷಯದ ಮೇಲಿರುವ ಅಕ್ಕರೆ. ಯಾವುದನ್ನು ನಾವು ಇಷ್ಟಪಟ್ಟು ಮಾಡುತ್ತೇವೆಯೋ ಅದು ಎಂದಿಗೂ ನಮಗೆ ಬೇಸರ ಮೂಡಿಸುವುದಿಲ್ಲ. ಬದುಕಿನಲ್ಲಿ ಯಾವುದನ್ನು ಕೊರತೆ ಎಂದು ತಿಳಿದುಕೊಳ್ಳುತ್ತೇವೆಯೋ ಅದು ಎಂದಿಗೂ ನಮಗೆ ನೆಮ್ಮದಿ ನೀಡುವುದಿಲ್ಲ. ಅದರ ಬದಲಿಗೆ ಕೊರತೆಯನ್ನೇ ಬದುಕಿನ ಒರತೆಯನ್ನಾಗಿ ಮಾಡಿಕೊಂಡು ಹೆಜ್ಜೆ ಹಾಕಿದ್ದೇ ಆದಲ್ಲಿ ಬಾಳು ಹಸಿರಾಗುತ್ತದೆ. ನಾವಿಲ್ಲಿ ಬಂದಿದ್ದು ಸಾಧನೆ ಮಾಡುವುದಕ್ಕಾಗಿಯೇ ಹೊರತು ಸಂಕಟ ಪಟ್ಟುಕೊಳ್ಳುವುದಕ್ಕಲ್ಲ. ಸವಾಲು ಹಾಕುವ ಜನಗಳ ಎದುರಿಗೆ ಜವಾಬು ನೀಡುತ್ತಲೇ ಬದುಕುವುದನ್ನು ಕಲಿತಾಗ ಮಾತ್ರ ಬದುಕಿನಲ್ಲಿ ಏನಾದರು ಮಾಡುವುದಕ್ಕೆ ಸಾಧ್ಯ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಪ್ರಾಂಶುಪಾಲ ಮಂಜುನಾಥ ಮ. ಜುನಗೊಂಡ ಅವರು; ಕಣ್ಣಿಲ್ಲದ ವ್ಯಕ್ತಿ ಇಷ್ಟೆಲ್ಲ ಮಾಡುವಾಗ ದೇವರು ನಮಗೆ ಎಲ್ಲವನ್ನು ಸರಿಯಾಗಿ ಇಟ್ಟಿದ್ದಾನೆ. ಹೊಸ ಶತಮಾನಕ್ಕೆ ಮುನ್ನುಡಿ ಬರೆಯುವ ಅವಕಾಶ ಕೊಟ್ಟಿದ್ದಾನೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಅಪ್ಪ ಅಮ್ಮನ ಆಸೆಯನ್ನು ಈಡೇರಿಸುವುದರ ಕಡೆಗೆ ಹೆಜ್ಜೆ ಹಾಕಬೇಕೆ ಹೊರತು ನನ್ನಿಂದ ಏನಾಗುತ್ತದೆ. ನಾನೇನು ಮಾಡಬಲ್ಲೆ ಎಂದುಕೊಂಡು ಅಳುತ್ತ ಕುಳಿತುಕೊಳ್ಳಬಾರದು. ಎಲ್ಲಿ ನೋವಿದೆಯೋ ಅಲ್ಲಿಯೇ ಗೆಲುವಿದೆ ಎನ್ನುವುದನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.
ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿ ನಿಲಯದ ಮುಖ್ಯಸ್ಥರು, ನಿಲಯಪಾಲಕರು ಉಪಸ್ಥಿತರಿದ್ದರು.
ಆಂಗ್ಲ ಉಪನ್ಯಾಸಕ ಮುಸ್ತಾಕ ಮಲಘಾಣ ಕಾರ್ಯಕ್ರಮವನ್ನು ನಿರೂಪಿಸಿದರು.

