ಉದಯರಶ್ಮಿ ದಿನಪತ್ರಿಕೆ
ವಿಜಯಪುರ: “ಒಬ್ಬ ವ್ಯಕ್ತಿ ಪರಿವರ್ತನೆಯಾದರೆ, ಸಮಾಜದ ರೂಪವೇ ಬದಲಾಗಬಹುದು ಎಂಬುದನ್ನು ಮಹರ್ಷಿ ವಾಲ್ಮೀಕಿ ತೋರಿಸಿಕೊಟ್ಟಿದ್ದಾರೆ. ಅವರು ಕೇವಲ ಮಹಾಕವಿ ಮಾತ್ರವಲ್ಲ, ಪರಿವರ್ತನೆಯ ಹರಿಕಾರರಾಗಿದ್ದಾರೆ,” ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಾಲ್ಮೀಕಿ ಅಧ್ಯಯನ ಪೀಠ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಾಲ್ಮೀಕಿ ರಾಮಾಯಣವು ಕೇವಲ ಸಾಹಿತ್ಯ ಕೃತಿ ಅಲ್ಲ, ಅದು ಆದರ್ಶ ಜೀವನದ ದಾರಿದೀಪ. ಅದರಲ್ಲಿ ಕಾಣುವ ಪಾತ್ರಗಳು ಸಮಾಜಕ್ಕೆ ಅಗತ್ಯವಾದ ಮೌಲ್ಯಗಳನ್ನು ಸಾರುತ್ತವೆ. ಆ ಮೌಲ್ಯಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, “ಮಹರ್ಷಿ ವಾಲ್ಮೀಕಿಯವರು ರಾಮಾಯಣ ರಚಿಸುವ ಮೊದಲು ಸಮಾಜದ ಓರೆಕೋರೆಗಳು, ಮಾನವ ಜೀವನದ ವಿವಿಧ ಆಯಾಮಗಳು ಹಾಗೂ ನೈತಿಕ ಮೌಲ್ಯಗಳ ಕುರಿತು ಸುದೀರ್ಘ ಅಧ್ಯಯನ ನಡೆಸಿದ್ದರು. ರಾಮಾಯಣದಲ್ಲಿ ವೈಜ್ಞಾನಿಕ ಚಿಂತನೆ, ಸಾಮಾಜಿಕ ಮೌಲ್ಯಗಳು ಮತ್ತು ಪರಿಸರ ಪ್ರಜ್ಞೆಯಂತಹ ಅನೇಕ ಅಂಶಗಳು ಒಳಗೊಂಡಿವೆ. ಇಂದಿಗೂ ವಿಶ್ವದ ಹಲವು ರಾಷ್ಟ್ರಗಳಲ್ಲಿ ರಾಮಾಯಣ ಪಠ್ಯಕ್ರಮದ ಭಾಗವಾಗಿದೆ ಎಂಬುದು ಅವರ ಕೃತಿಯ ಶಾಶ್ವತತೆಯ ಸಾಕ್ಷಿಯಾಗಿದೆ ಎಂದು ಹೇಳಿದರು.
ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ.ನಾಗರಾಜ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಜಗತ್ತಿನ ದಾರ್ಶನಿಕ ಮಹಾಕವಿಗಳಲ್ಲಿ ಅಗ್ರಗಣ್ಯರು. ಅವರ ಸಾಧನೆ ಭಾರತೀಯ ಸಂಸ್ಕೃತಿಯ ಜೀವಂತ ಪ್ರತೀಕ. ರಾಮಾಯಣದ ಪ್ರತಿಯೊಂದು ಪಾತ್ರಕ್ಕೂ ಅವರು ಜೀವ ತುಂಬಿದ್ದಾರೆ. ಇಂದು ರಾಮಾಯಣದ ಕುರಿತಾಗಿ ವಿಶ್ವದಾದ್ಯಂತ ಸಂಶೋಧನೆಗಳು, ಅಧ್ಯಯನಗಳು ನಿರಂತರವಾಗಿ ನಡೆಯುತ್ತಿವೆ, ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣನವರ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ನಿರ್ದೇಶಕ ಪ್ರೊ.ಎನ್.ಎಲ್.ಮಲ್ಲಿಕಾರ್ಜುನ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಸಂದೀಪ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ. ಹನುಮಂತಯ್ಯ ಪೂಜಾರಿ ವಂದಿಸಿದರು.

