ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ತಗುಲದಂತೆ ತಡೆಯುವಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲಾಗಿರುವ ಎಚ್ ಪಿವಿ (ಹೂಮನ್ ಪ್ಯಾಪಿಲೋಮ ವೈರಸ್) ಲಸಿಕೆಯನ್ನು ನೀಡಲು ಆರೋಗ್ಯ ಇಲಾಖೆ ಸಜ್ಜಾಗಿದ್ದು, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದೆ.
ತಾಲೂಕಿನ ಚಿಕ್ಕಲಕಿ ಕ್ರಾಸ್ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ ಶಾಲಾ ಪ್ರೌಢಶಾಲಾ ಬಾಲಕಿಯರಿಗೆ ಲಸಿಕೆ ನೀಡಿ ಮಾತನಾಡಿದ ಮುಖ್ಯ ಆರೋಗ್ಯಧಿಕಾರಿ ಡಾ.ಮುಕುಂದ ಕಾಂಬಳೆ ಬಾಲಕಿಯರಿಗೆ 14ರಿಂದ 15 ವರ್ಷ ವಯೋಮಾನದ ಬಾಲಕಿಯರಿಗೆ ಉಚಿತವಾಗಿ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ. ತಾಲೂಕಿನಾದ್ಯಂತ ಈ ವಯೋಮಾನದ ಸುಮಾರು ಐದು ಸಾವಿರಕ್ಕೂ ಅಧಿಕ ಬಾಲಕಿಯರಿದ್ದಾರೆ ಎಂದು ಅಂದಾಜಿಸಲಾಗಿದೆ. ಅಮೆರಿಕದ ಗಾರ್ಡಿಸಿಲ್ ಕಂಪನಿ ಉತ್ಪಾದಿಸಿರುವ ಎಚ್‌ಪಿವಿ ಲಸಿಕೆಯ ಒಂದು ಡೋಸ್ ಮಾತ್ರ. ಪ್ರತಿ ಬಾಲಕಿಗೆ ನೀಡಲಾಗುತ್ತದೆ. ನಮ್ಮ ಆರೋಗ್ಯ ಕೇಂದ್ರಕ್ಕೆ ಮೊದಲ ಹಂತದ ಡೋಸ್ ಪೂರೈಕೆಯಾಗಿದ್ದು, ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ನಮ್ಮ ಚಿಕ್ಕಲಕಿ ಕ್ರಾಸ್ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿದೆ. ಶುಷ್ರೂಕರಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಬಿಇಒಗಳ ಜೊತೆ ಸಭೆ ನಡೆಸಿ ಮಾಹಿತಿ ನೀಡಲಾಗಿದೆ. ಆರೋಗ್ಯ ಕಾರ್ಯಕರ್ತರು ಶಾಲೆ, ಕಾಲೇಜುಗಳಿಗೆ ತೆರಳಿ ಅರಿವು ಮೂಡಿಸಲಿದ್ದಾರೆ ಎಂದು ತಿಳಿಸಿದರು. ರಜಾ ದಿನ ಹೊರತುಪಡಿಸಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆ ನಡುವೆ ಲಸಿಕೆ ಪಡೆಯಬಹುದು. ಬಾಲಕಿಯ ಜೊತೆ ಪಾಲಕರು ಆಸ್ಪತ್ರೆಗೆ ಬಂದರೆ ಮಾತ್ರ ಚುಚ್ಚುಮದ್ದು ಹಾಕಲಾಗುವುದು. ಅವರ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸುವ ವ್ಯವಸ್ಥೆಯಿದೆ. ಈ ಮಾಹಿತಿಯನ್ನು ಯು-ವಿನ್ ಆ್ಯಪ್‌ನಲ್ಲಿ ನಮೂದಿಸಲಾಗುತ್ತದೆ. ಬೇಡ ಎಂದು ತಿರಸ್ಕರಿಸುವ ಆಯ್ಕೆಯೂ ಇದೆ ಎಂದು ಮಾಹಿತಿ ನೀಡಿದರು.
ಒಂದು ಅಂದಾಜಿನ ಪ್ರಕಾರ, ಭಾರತದ ಮಹಿಳೆಯರನ್ನು ಕಾಡುವ ವಿವಿಧ ರೀತಿಯ ಕ್ಯಾನ್ಸರ್‌ಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. 2024ರಲ್ಲಿ 78,000ಕ್ಕೂ ಅಧಿಕ ಮಹಿಳೆಯರಲ್ಲಿ ಸೋಂಕು ಕಂಡುಬಂದಿತ್ತು. ಅಂದಾಜು 48,000 ಮಹಿಳೆಯರ ಸಾವಿಗೆ ಗರ್ಭಕಂಠದ ಕ್ಯಾನ್ಸರ್ ಕಾರಣವಾಗಿತ್ತು ಎಂದು ಆರೋಗ್ಯ ಇಲಾಖೆಯ ದತ್ತಾಂಶಗಳು ತಿಳಿಸಿವೆ.

