ಕಲಕೇರಿಯಲ್ಲಿ ಶ್ರೀ ಪರಮೇಶ್ವರಿ ದೇವಿ ಪುರಾಣ ಪ್ರವಚನ | ದಾರ್ಮಿಕ ವಿಜಯ ಮಹೋತ್ಸವ
ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಪ್ರತಿಯೊಬ್ಬರೂ ತಮ್ಮ ಅಂತ:ಕರಣದ ಮಾತುಗಳನ್ನು ಕೇಳಿ ಆತ್ಮಸಾಕ್ಷಿಯಾಗಿ ಬದುಕನ್ನು ನಡೆಸಿದರೆ ಜೀವನದಲ್ಲಿ ಪುಣ್ಯಪ್ರಾಪ್ತಿಯಾಗುತ್ತದೆ ಜೊತೆಗೆ ನಾವು ಪರರಿಗೆ ಉಪಕಾರ ಮಾಡಿದಾಗ ನಮಗೆ ಪುಣ್ಯ ಬರುತ್ತದೆಯೇ ಹೊರತು ಇನ್ನೊಬ್ಬರಿಗೆ ಕೇಡನ್ನು ಬಯಸಿದರೆ ಅವರಲ್ಲಿರುವ ಪಾಪ ಕಡಿಮೆಯಾಗಿ ನಮ್ಮನ್ನು ಸುತ್ತಿಕೊಳ್ಳುತ್ತದೆ ಆದ್ದರಿಂದ ಪರರಿಗೆ ಉಪಕಾರ ಮಾಡದಿದ್ದರೂ ಪರವಾಗಿಲ್ಲ ಇನ್ನೊಬ್ಬರಿಗೆ ಮನಸ್ಸಿನಲ್ಲಿಯೂ ಕೂಡಾ ಕೇಡನ್ನು ಬಯಸಬಾರದು ಅಂದಾಗ ಮಾತ್ರ ನಮ್ಮ ಜೀವನ ಪಾವನವಾಗುತ್ತದೆ ಎಂದು ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಆಶಿರ್ವಚನದಲ್ಲಿ ಹೇಳಿದರು.
ಈ ಜಗತ್ತಿನಲ್ಲಿ ಅತಿ ವೇಗವಾಗಿ ಚಲಿಸುವ ವಸ್ತು ಎಂದರೆ ಮನಸ್ಸು, ಅಂತಹ ಮನಸ್ಸನ್ನು ಒಳ್ಳೆಯದಕ್ಕೊಸ್ಕರ ಇಂತಹ ಧಾರ್ಮಿಕ ಕಾರ್ಯಗಳಲ್ಲಿ, ದೇವರ ಪ್ರಾರ್ಥನೆಯಲ್ಲಿ, ಪುರಾಣ, ಪ್ರವಚನಗಳಲ್ಲಿ ತೊಡಗಿಸಿಕೊಂಡರೆ ಒಳ್ಳೆಯ ಸದೃಡ, ಸುಶಿಕ್ಷಿತ ಸಮಾಜ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ ಎಂದರು.
ಕಲಕೇರಿಯ ಭವಾನಿ ದೇವಸ್ಥಾನದಲ್ಲಿ ಶರನ್ ನವರಾತ್ರಿ ವಿಜಯದಶಮಿ ನಿಮಿತ್ಯವಾಗಿ ದೇವಿ ಪುರಾಣ ಮಂಗಲೋತ್ಸವ, ಸಾಧಕರಿಗೆ ಸನ್ಮಾನದ ತನ್ನಿಮಿತ್ತ ನಡೆದ ಧಾರ್ಮಿಕ ವಿಜಯಮಹೋತ್ಸವದ ಧರ್ಮಸಭೆಗೆ ಚಾಲನೆ ನೀಡಿ ಜಗದ್ಗುರುಗಳು ಆರ್ಶಿವಚನ ನೀಡಿದರು.
ಸುಮಾರು ೩೦ ವರ್ಷಗಳಿಂದ ದೇವಿಯ ಪುರಾಣ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿರುವುದು ಕುಲಕರ್ಣಿ ಮನೆಯವರ ಹೆಮ್ಮೆಯಾಗಿದೆ, ಇಂತಹ ಕಾರ್ಯಕ್ರಮಗಳು ಕಲಕೇರಿಯಲ್ಲಿ ಅವಿರತವಾಗಿ ನಡೆದುಕೊಂಡು ಬಂದಿರುವುದು ಇಲ್ಲಿಯ ಭಕ್ತರ ಭಕ್ತಿಯನ್ನು ಎತ್ತಿ ತೋರಿಸುತ್ತದೆ, ಇದೇ ರೀತಿ ಇಂತಹ ಧರ್ಮ ಕಾರ್ಯಗಳು ಮುಂದೆಯೂ ನಡೆಯಲಿ ಎಂದು ಮಾಗಣಗೇರಿಯ ವಿಶ್ವರಾದ್ಯ ಶಿವಾಚಾರ್ಯರು ಹೇಳಿದರು.
ಈ ವೇಳೆ ಹಿರೂರದ ಜಯಸಿದ್ಧೇಶ್ವರ ಶಿವಾಚಾರ್ಯರು ೯ ದಿನಗಳ ಕಾಲ ನಡೆದ ಪುರಾಣ ಪ್ರವಚನವನ್ನು ಮಂಗಲಗೊಳಿಸಿದರು.
ಕೆಪಿಸಿಸಿ ಸದಸ್ಯರಾದ ಬಿ.ಎಸ್.ಪಾಟೀಲ ಯಾಳಗಿ, ಕೆಪಿಸಿಸಿ ಕಾರ್ಯದರ್ಶಿಗಳಾದ ಡಾ.ಪ್ರಭುಗೌಡ ಲಿಂಗದಳ್ಳಿ, ನಿವೃತ್ತ ಪ್ರಾಚಾರ್ಯರಾದ ಸಿ.ಎಸ್.ಹಿರೇಮಠ, ನಿವೃತ್ತ ಉಪನ್ಯಾಸಕರಾದ ಎಸ್.ಎಸ್.ಕಲಶೆಟ್ಟಿ ಅವರು ಮಾತನಾಡಿದರು.
ಈ ವೇಳೆ ಕಾಶಿ ಜಗದ್ಗುರುಗಳಿಗೆ ಸೇರಿದಂತೆ ಹಲವು ಶ್ರೀಗಳಿಗೆ ಗೌರವ ಸಮರ್ಪಣೆ ಸೇವೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ, ನಿವೃತ್ತ ಶಿಕ್ಷಕರಿಗೆ ಭವಾನಿ ದೇವಸ್ಥಾನದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಬಾಲಪ್ರತಿಭೆ ಕುಮಾರಿ ಅಕ್ಷರಾ ಕಳಸದ ಪ್ರಸ್ತುತ ಪಡಿಸಿದ ಭರತನಾಟ್ಯ ನೃತ್ಯ ಮತ್ತು ರೇಣುಕ ಗವಾಯಿಗಳ ಸಂಗೀತ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಈ ವೇಳೆ ಹಿರೂರಿನ ಜಯಸಿದ್ಧೇಶ್ವರ ಶಿವಾಚಾರ್ಯರು, ಹಿರೇಮಠದ ಸಿದ್ಧರಾಮ ಶಿವಾಚಾರ್ಯರು, ಗದ್ದುಗೆಮಠದ ಮಡಿವಾಳೇಶ್ವರ ಶಿವಾಚಾರ್ಯರು, ಸದಾನಂದ ಹಿರೇಮಠ, ಕುಮಾರಸ್ವಾಮಿ ಜಾಲಹಳ್ಳಿಮಠ, ಮೃತ್ಯುಂಜಯ ಮಠಪತಿ, ಬಸನಗೌಡ ಎಸ್.ಪಾಟೀಲ ಯಡಿಯಾಪುರ, ಸುರೇಶ ನಾಡಗೌಡ್ರು, ಶಾಂತಪ್ಪ ಪಟ್ಟಣಶೆಟ್ಟಿ, ಮಲ್ಲಿನಾಥ ದೇಸಾಯಿ, ನಿವೃತ್ತ ಶಿಕ್ಷಕರಾದ ಜಿ.ಎನ್.ಬಡೆಮ್ಮಗೋಳ, ನಿಂಗನಗೌಡ ಗುಂಡಕನಾಳ, ದೇವಿಂದ್ರ ಜಂಬಗಿ, ಯಮನೂರಿ ಕುಲಕರ್ಣಿ ಸೇರಿದಂತೆ ಕಲಕೇರಿ ಹಾಗೂ ಸುತ್ತಮುತ್ತಲಿನ ಭಕ್ತಾಧಿಗಳು ಉಪಸ್ಥಿತರಿದ್ದರು.

