ಐತಿಹಾಸಿಕ ಜಾತ್ರೆಯಲ್ಲಿ ಹೇಳಿಕೆಗಳನ್ನು ಕೇಳಲು ಸೇರಿದ ಜನಸ್ತೋಮ
ಉದಯರಶ್ಮಿ ದಿನಪತ್ರಿಕೆ
ದೇವರ ಹಿಪ್ಪರಗಿ: ಅಶ್ವಾರೂಢ ರಾವುತರಾಯ ಬಂಡಿಯಲ್ಲಿ ಆಸೀನನಾಗಿ ಮಲ್ಲಯ್ಯನ ದೇವಸ್ಥಾನಕ್ಕೆ ತೆರಳುವುದರೊಂದಿಗೆ ಐತಿಹಾಸಿಕ ರಾವುತರಾಯ-ಮಲ್ಲಯ್ಯ ಜಾತ್ರೆ ಆರಂಭಗೊಂಡಿತು.
ಪಟ್ಟಣದ ಸರ್ವಜನಪೂಜಿತ ರಾವುತರಾಯ ಶನಿವಾರ ನಸುಕಿನ ಮೂರು ಗಂಟೆಗೆ ಅಶ್ವಾರೂಢನಾಗಿ ತೆರೆದ ಬಂಡಿಯಲ್ಲಿ ಆಸೀನನಾಗಿ ಮೂಲ ದೇವಸ್ಥಾನದಿಂದ ಹೊರಟು ಬೆಳಗಿನ ೮ ಗಂಟೆಗೆ ಮಾನೆದೊಡ್ಡಿ ಎಂದೇ ಕರೆಯಲಾಗುವ ಸ್ಥಳದಲ್ಲಿ ನೂರಾರು ಭಕ್ತರು ಕಾಲ್ನಡಿಯಿಂದ ಹೊತ್ತು ತಂದ ಹೂಹಾರಗಳಿಂದ ಅಲಂಕಾರಗೊಂಡನು. ಇದನ್ನು ಹೂ ಮುಡಿಯುವುದು ಎಂದೇ ಕರೆಯಲಾಗುತ್ತಿದೆ. ನಂತರ ಶೀಡಗಟ್ಟಿ ಎಂಬ ಸ್ಥಳದಲ್ಲಿ ಕಾರಣಿಕರಿಂದ ಮುಂಬರುವ ಭವಿಷ್ಯದ ಕುರಿತಾಗಿ ಹೇಳಿಕೆಗಳು ಹೇಳಲ್ಪಟ್ಟವು.
ಕಾರಣಿಕರ ಹೇಳಿಕೆಗಳು: ಬಿಳಿ ಕಾಳ ಮೇಲಾಯಿತು, ಕೆಂಪಕಾಳ ಕೆಳಗಾಯಿತು. ಕುಸುಬಿ, ಅಗಸಿ ಬೆನ್ನುಹತ್ತಿದವು. ಹತ್ತಿ ಗಗನಕ್ಕ ಹಾರಿತು, ಕಾಲಮಾನ ಬಾಳ ಕಷ್ಟ ಬಂತು, ಬಸವಣ್ಣನ ಕಾಪಾಡುಕೊಂಡವನ ಲಿಂಗದಂಗ ರಕ್ಷಣೆ ಮಾಡತೀನಿ. ನನ್ನ ಮೇಲೆ ನಂಬಿಕೆ ಇಟ್ಟು ಮಾಡಕತ್ತಿರಲ್ಲಾ ಬಾಳ ಸಂತೋಷ ಆಯಿತು. ಇದೇ ರೀತಿ ಮಾಡಿದ್ರ ಒಂದನೇ ಶ್ರೀಶೈಲ ಮಾಡ್ತೀನಿ. ಧರ್ಮ, ಕರ್ಮ ನಾಲ್ಕು ಮೂಲಿ ಸೋಸಿ ನೋಡುದರಾಗ ಕರ್ಮ ಹೆಚ್ಚಾಯಿತು. ಧರ್ಮ ಉಳಿಲಿಲ್ಲ. ಯಾರು ಧರ್ಮ ಹಿಡಿದು ನಡಕೋತಿರೀ ಅವರನ್ನ ಬಗಲಾಗ ಹಿಡಿದು ಕಾಪಾಡತೀನಿ. ಹತ್ತಿ ಬಂಗಾರ ಆಯಿತು. ನಾಲ್ಕು ಮೂಲಿ ಸಮ ಮಾಡುದರಾಗ ಒಂದು ಮೂಲಿ ಉಳಿತು. ಹಸ್ತ, ಚಿತ್ತಿ, ಸ್ವಾತಿ ಒಂದೊಂದು ಸರ್ವ ಕೊಡತೀನಿ. ನನ್ನಂತ ನಡದರ ಅವರನ್ನು ಕಾಪಾಡತೀನಿ. ನಾ ಅಂದವನ ನೆಲಕ್ಕ ತುಳಿದಿನಿ. ರೈತಗ ಕಷ್ಟ ಕಾಲ ಬಂತು, ನನ್ನಂತೆ ನಡದ್ರೆ ಬಂದ ಕಷ್ಟ ಬಯಲು ಮಾಡತೀನಿ ಎಂದು ಹೇಳಲಾಯಿತು.
ನಂತರ ರಾವುತರಾಯನ ಬಂಡಿ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬನ್ನಿ ಮಹಾಕಾಳಿ ವೃಕ್ಷಕ್ಕೆ ತೆರಳಿ ಬನ್ನಿ ಮುಡಿದು ಮಲ್ಲಯ್ಯನ ದೇವಸ್ಥಾನ ತಲುಪಿತು. ಆನಂತರ ರಾವುತರಾಯ- ಗಂಗಿಮಾಳಮ್ಮರ ಮದುವೆಯ ಸಾಂಪ್ರದಾಯಿಕ ರೂಪಕ ಜರುಗಿತು. ಸತತ ಐದು ದಿನಗಳ ಕಾಲ ಜರುಗುವ ಜಾತ್ರಾ ಮಹೋತ್ಸವದ ಮೊದಲ ದಿನ ರಾವುತರಾಯನು ಮಲ್ಲಯ್ಯನ ದೇವಸ್ಥಾನದಲ್ಲಿ ಆಸೀನನಾಗುವುದರೊಡನೆ ಜಾತ್ರೆಗೆ ಚಾಲನೆ ದೊರಕಿತು. ಜಾತ್ರೆಯ ಅಂಗವಾಗಿ ಸಿದ್ಧೇಶ್ವರ ಸ್ವಾಮೀಜಿ ಯುವಕ ಮಂಡಳಿಯಿಂದ ಅನ್ನ ಪ್ರಸಾದ ಸೇವೆ ಜರುಗಿತು. ಮನರಂಜನೆಗಾಗಿ ನಾಟಕ ಕಂಪನಿ, ಮಕ್ಕಳಿಗಾಗಿ ನೂರಾರು ಮಾರಾಟ ಮಳಿಗೆಗಳು ಹಾಗೂ ಮನರಂಜನೆಯ ಸಾಧನಗಳ ತಯಾರಿ ಭರದಿಂದ ಆರಂಭಗೊಂಡಿರುವುದು ಕಂಡು ಬಂತು.

