ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕಾರ್ಯಕ್ರಮದಲ್ಲಿ ಹಿರಿಯ ಗಾಂಧೀವಾದಿ ಸುಧೀಂದ್ರ ಕುಲಕರ್ಣಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸತ್ಯ ಮತ್ತು ಅಹಿಂಸೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜೀವನ ಸಂದೇಶಗಳಾಗಿವೆ. ನನ್ನ ಜೀವನ ಕ್ರಮವೇ ನನ್ನ ಜೀವನ ಸಂದೇಶ ಎಂದು ಗಾಂಧೀಜಿ ಅವರು ಯಾವಾಗಲೂ ಹೇಳುತ್ತಿದ್ದರು ಎಂದು ಹಿರಿಯ ಗಾಂಧೀವಾದಿ ಸುಧೀಂದ್ರ ಕುಲಕರ್ಣಿ ಹೇಳಿದರು.
ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಕೋಶ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆಗಸ್ಟ್ಕ್ರಾಂತಿ ಟ್ರಸ್ಟ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಮಹಾತ್ಮಾ ಗಾಂಧೀಜಿ ಅವರ ಜೀವನ ಸಂದೇಶಗಳು” ಕುರಿತು ಮಾತನಾಡಿದರು.
ನಾನು ಬರೆದದ್ದು, ನನ್ನ ಬಗೆಗೆ ಬೇರೆಯವರು ಬರೆದಿರುವುದಕ್ಕಿಂತ ನನ್ನ ಬದುಕೇ ನನ್ನ ಜೀವನ ಸಂದೇಶ ಎಂದು ಹೇಳುತ್ತಿದ್ದ ಮಹಾತ್ಮಾ ಗಾಂಧೀಜಿಯವರ ವಿಚಾರ-ಆಚಾರಗಳಲ್ಲಿ ಯಾವುದೇ ಅಂತರವಿರುತ್ತಿರಲಿಲ್ಲ. ಇಂಥ ಮಹಾನ್ ವ್ಯಕ್ತಿಯ ಆದರ್ಶ ಇಡೀ ಜಗತ್ತಿಗೇ ಮಾದರಿ ಎಂದು ಬಣ್ಣಿಸಿದರು.
ಸತ್ಯ ಬಹಳ ಗಹನವಾದ ವಿಷಯ. ಸತ್ಯವೇ ದೇವರು. ನಾಸ್ತಿಕರಿಗೆ ದೇವರ ಬಗೆಗೆ ನಂಬಿಕೆ ಇರಲಿಕ್ಕಿಲ್ಲ. ಆದರೆ ಸತ್ಯವೇ ದೇವರು ಎಂಬುದನ್ನು ಅವರೂ ನಂಬುತ್ತಾರೆ. ಹಾಗಾಗಿ ನಾಸ್ತಿಕರು ಮತ್ತು ಆಸ್ತಿಕರು ಇಬ್ಬರೂ ಸತ್ಯವನ್ನು ದೇವರು ಎಂದು ನಂಬುತ್ತಾರೆ. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಸತ್ಯದ ಹಾದಿಯಲ್ಲಿ ನಡೆಯಬೇಕು. ಅಂದಾಗ ಮಾತ್ರ ಮಾನವನ ಉದ್ದಾರ ಸಾಧ್ಯ ಎಂದು ಸುಧೀಂದ್ರ ಕುಲಕರ್ಣಿ ಪ್ರತಿಪಾದಿಸಿದರು.
ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಫೌಂಡೇಶನ್ ಅಧ್ಯಕ್ಷ ನೇತಾಜಿ ಗಾಂಧಿ ಮಾತನಾಡಿ, “ಗಾಂಧೀಜಿಯು ಕಲಿಯುಗದ ಬುದ್ಧ” ಎಂದು ಕುವೆಂಪು ಅವರು ವಿಶ್ಲೇಷಿಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿ, ಗಾಂಧೀಜಿಯ ತತ್ವಗಳನ್ನು ಪುನರ್ಮನನ ಮಾಡಿಕೊಳ್ಳುವುದು ಮತ್ತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು, ಅವರಿಗೆ ನೀಡುವ ನಿಜವಾದ ಗೌರವವಾಗಿದೆ. ಶಿಸ್ತು ಜೀವನದ ಆಸ್ತಿಯಾಗಿದ್ದು, ಅದು ವ್ಯಕ್ತಿಯ ನೈತಿಕತೆ, ಹೊಣೆಗಾರಿಕೆ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಮಾರ್ಗದರ್ಶಿಯಾಗುತ್ತದೆ. ಪ್ರತಿಯೊಬ್ಬರೂ ಶಿಸ್ತುಬದ್ಧ ಜೀವನ ನಡೆಸಿದರೆ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪ್ರಗತಿ ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಭಾಷಣ ಹಾಗೂ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಆಗಸ್ಟ್ ಕ್ರಾಂತಿ ಟ್ರಸ್ಟ್ನ ಸದಸ್ಯೆ ರೇವತಿ ಕಟ್ಟಿ, ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್. ಲಕ್ಕಣ್ಣವರ, ವಿವಿಧ ವಿಭಾಗಗಳ ಮುಖ್ಯಸ್ಥರು, ಅತಿಥಿ ಉಪನ್ಯಾಸಕರು, ಸ್ನಾತಕ ಸ್ನಾತಕೋತರ ವಿದ್ಯಾರ್ಥಿನಿಯರು, ಸಂಶೋಧನಾ ವಿದ್ಯಾರ್ಥಿನಿಯರು ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಜೀವನದ ಪ್ರಮುಖ ಘಟನಾವಳಿಗಳ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಗಾಂಧಿ ಭಜನೆ ಮಾಡಿದರು.
ಮಹಿಳಾ ವಿವಿಯ ಎನ್.ಎಸ್.ಎಸ್ ಕೋಶದ ಸಂಯೋಜನಾಧಿಕಾರಿ ಪ್ರೊ.ಅಶೋಕಕುಮಾರ ಸುರಪುರ ಸ್ವಾಗತಿಸಿದರು. ಗಾಂಧಿ ಜಯಂತಿ ಸಮಿತಿಯ ಅಧ್ಯಕ್ಷ ಪ್ರೊ.ಮಹೇಶ ಚಿಂತಾಮಣಿ ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಯರನ್ನು ಪರಿಚಯಿಸಿದರು. ಎನ್.ಎಸ್.ಎಸ್ ಕೋಶದ ಕಾರ್ಯಕ್ರಮಾಧಿಕಾರಿ ಡಾ.ಕಲಾವತಿ ಎಚ್. ಕಾಂಬಳೆ ನಿರೂಪಿಸಿದರು. ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಅಮರನಾಥ ಪ್ರಜಾಪತಿ ವಂದಿಸಿದರು.

