ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕನಕದಾಸ ವೃತ್ತದಿಂದ ಗೋಲಗೇರಿ ಬೈಪಾಸವರೆಗಿನ ರಸ್ತೆಗೆ ಸ್ವಾಮಿ ರಮಾನಂದ ತೀರ್ಥರ ಹೆಸರಿಟ್ಟಿದ್ದು ಸಂತಸ. ಅವರ ಹೆಸರಿನಲ್ಲಿ ಗೋಲಗೇರಿ ಬೈಪಾಸ್‌ಗೆ ಸ್ವಾಗತ ಬಾಗಿಲು ನಿರ್ಮಾಣ ಮಾಡಬೇಕು. ಮತ್ತು ಇದೊಂದು ರಾಷ್ಟ್ರ ಮಟ್ಟದ ಸ್ಮಾರಕ ಭವನ. ಇದನ್ನು ಯಾವುದೋ ಒಂದು ಸಮುದಾಯಕ್ಕೆ ಹಸ್ತಾಂತರಿಸುವುದು ನಮ್ಮ ವಿರೋಧವಿದೆ. ಹಸ್ತಾಂತರಿಸುವುದಾದರೆ ಅದಕ್ಕೆ ಖಂಡಿಸುತ್ತೇವೆ ಎಂದು ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ ಹೇಳಿದರು.
ಸಿಂದಗಿ ಪಟ್ಟಣದ ಸ್ವಾಮಿ ರಮಾನಂದ ತೀರ್ಥರ ಸ್ಮಾರಕ ಭವನದಲ್ಲಿ ಹಮ್ಮಿಕೊಂಡ ಸ್ವಾಮಿರಮಾನಂದ ತೀರ್ಥರ ೧೨೨ನೆಯ ಜಯಂತಿ ಕಾರ್ಯಕ್ರಮದಲ್ಲಿ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ರಾಷ್ಟ್ರಕ್ಕಾಗಿ ದುಡಿದ ಸ್ವಾತಂತ್ರ ಹೋರಾಟಗಾರರ ಜಯಂತಿಯನ್ನು ನಾವು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಆಚರಿಸಿ ಗೌರವಿಸುತ್ತೇವೆ. ಆದರೆ ಸ್ವಾಮಿರಮಾನಂದ ತೀರ್ಥರ ಜಯಂತಿ ಆಚರಣೆಯ ಕುರಿತು ರಾಜ್ಯ ಸರಕಾರ ಗಮನ ಹರಿಸದೇ ಇರುವದರಿಂದ ಅವರ ಅಭಿಮಾನಿಗಳು ಮತ್ತು ಸಿಂದಗಿ ನಗರದ ಜನತೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ಸರಕಾರದ ವತಿಯಿಂದ ಜಯಂತಿ ಆಚರಿಸುವಂತೆ ಒತ್ತಾಯಿಸಲಾಗುವುದು. ಜನತೆಯಲ್ಲಿ ಅವರ ಕುರಿತು ಸಂಪೂರ್ಣ ಮಾಹಿತಿ ಇಲ್ಲದಿರುವುದರಿಂದ ಅದನ್ನು ರಾಜ್ಯವ್ಯಾಪಿ ಪಸರಿಸುವ ಕಾರ್ಯ ಮಾಡಲಾಗುವುದು. ಇದಕ್ಕೆ ಬುದ್ದಿ ಜೀವಿಗಳು, ಹೋರಾಟಗಾರರು, ಸ್ವಾತಂತ್ರಾಭಿಮಾನಿಗಳು ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.
ಈ ವೇಳೆ ತಹಶೀಲ್ದಾರ್ ಕರೆಪ್ಪ ಬೆಳ್ಳಿ ಮಾತನಾಡಿ, ಹೈದ್ರಾಬಾದ್ ಕರ್ನಾಟಕ ವಿಮೋಚನೆಯ ರೂವಾರಿ ಸ್ವಾಮಿರಮಾನಂದ ತೀರ್ಥರು ಆಂಧ್ರಪ್ರದೇಶ ಮತ್ತು ಮಹಾರಾಷ್ಟç ರಾಜ್ಯಗಳಲ್ಲಿ ರಾಷ್ಟç ಪುರುಷರಂತೆ ಪೂಜಿಸಲ್ಪಡುತ್ತಾರೆ. ಆದರೆ ಅವರ ಹುಟ್ಟೂರಾದ ಸಿಂದಗಿ ಪಟ್ಟಣದಲ್ಲಿಯೇ ಅವರಿಗೆ ಸಿಗಬೇಕಾದ ಗೌರವಗಳು ಸಿಗದೇ ಇದ್ದದ್ದು ಬೇಸರದ ಸಂಗತಿ. ಹೈದ್ರಾಬಾದ ನಿಜಾಮರ ದಬ್ಬಾಳಿಕೆಯಿಂದ ತತ್ತರಿಸಿ ಹೋದ ಈಗಿನ ಹೈದ್ರಾಬಾದ ಕರ್ನಾಟಕದ ವಿಮೋಚನೆಗೆ ಟೊಂಕ ಕಟ್ಟಿ ನಿಜಾಮರನ್ನು ದಮನ ಬಡಿಯುವವರೆಗು ವಿಶ್ರಮಿಸದ ಒಬ್ಬ ಮಹಾ ಪುರಷನ ಜನ್ಮಸ್ಥಳ ಸಿಂದಗಿ ಎಂಬುದು ನಮಗೆಲ್ಲ ಹೆಮ್ಮೆಯ ಸಂಗತಿ. ನೆರೆಯ ಮಹಾರಾಷ್ಟç ಹಾಗೂ ಆಂಧ್ರಪ್ರದೇಶಗಳಲ್ಲಿ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಕೇಂದ್ರಗಳಿದ್ದು, ಕರ್ನಾಟಕದಲ್ಲಿಯೇ ಅವರ ಹೆಸರು ಚಿರಸ್ಥಾಯಿಯಾಗಿರದಿರುವುದು ವಿಷಾದಕರ ಸಂಗತಿ. ಕಾರಣ ಮುಂಬರುವ ದಿನಮಾನಗಳಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ರಮಾನಂದ ತೀರ್ಥರಿಗೆ ರಾಷ್ಟ ಸಂತರಿಗೆ ದೊರೆಯಬೇಕಾದ ಗೌರವವನ್ನು, ಪೂಜ್ಯನೀಯ ಸ್ಥಾನವನ್ನು ಕಲ್ಪಿಸಿ ಕೊಡುವ ಪ್ರಯತ್ನ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಹೆಚ್.ಟಿ.ಕುಲಕರ್ಣಿ, ರಂಗನಾಥ ಖೇಡಗಿ, ಪ್ರಕಾಶ ಹಿರೇಕುರುಬರ, ಶಾಂತು ರಾಣಾಗೋಳ, ಪ್ರದೀಪ ದೇಶಪಾಂಡೆ, ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ, ಎಂ.ಪಿ.ಕುಲಕರ್ಣಿ, ಅರುಣ ಜೋಷಿ, ಬಸವರಾಜ ಕುಂಬಾರ, ಶಿವಕುಮಾರ ಶಿವಸಿಂಪಿ, ಆಯ್.ಎ.ಮಕಾಂದಾರ, ಶ್ರೀನಿವಾಸ ಜೋಷಿ, ಶ್ರೀಶೈಲ ಯಳಮೇಲಿ, ಬಸವರಾಜ ಕಕ್ಕಳಮೇಲಿ, ಎಪಿಎಂಸಿ ನಿರ್ದೇಶಕ ಮಾಳು ಪೂಜಾರಿ ಸೇರಿದಂತೆ ಅನೇಕರು ಇದ್ದರು.

