ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೧೨ ನೇಯ ಶತಮಾನದ ಶರಣರು ಜ್ಞಾನ ದಾಸೋಹ ಮತ್ತು ಶರಣ ಸಂಸ್ಕೃತಿಯ ಮೂಲಕ ಸಮಾಜದಲ್ಲಿ ಮೇಲು-ಕೀಳು, ಬಡವ-ಬಲ್ಲಿದ, ಜಾತಿ, ಮತ, ಪಂಥಗಳೆಂಬ ಭೇದವನ್ನು ತೊಲಗಿಸಿ, ಜನರಲ್ಲಿ ಒಗ್ಗಟ್ಟು, ಸಮನ್ವಯ ಭಾವ, ಸಮಾನತೆ, ಧರ್ಮ ಸಹಿಂಷ್ಣುತೆ ಮತ್ತು ಸಮಷ್ಠಿ ಭಾವದೊಂದಿಗೆ ಬಾಳಿ ಬದುಕಿದವರು. ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಸ್ಪೃಶ್ಯತೆ, ಮೌಢ್ಯತೆ, ಅನಿಷ್ಟಗಳನ್ನು ಹೊಡೆದೋಡಿಸಿ, ಜನರಲ್ಲಿ ಅಧ್ಯಾತ್ಮಿಕ ಅನುಭಾವವನ್ನು ಮೂಡಿಸಿದರು ಎಂದು ಅಧ್ಯಾಪಕ ಗುರುಬಸಯ್ಯ ಹಿರೇಮಠ ಅಭಿಪ್ರಾಯಪಟ್ಟರು.
ಅವರು ನಗರದ ಸೇನಾ ನಗರದಲ್ಲಿರುವ ಶ್ರೀ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಜರುಗಿದ “ದಾನದ ಮಹತ್ವ” ವಿಷಯ ಕುರಿತ ಉಪನ್ಯಾಸದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ತನು-ಮನ ಮತ್ತು ಶುದ್ಧಭಾವದಿಂದ ಮಾಡಿದ ದಾನವು ಸಮಾಜಮುಖಿ, ಸಾಮಾಜಿಕ ಕಾರ್ಯ, ದೇವಸ್ಥಾನದ ಜೀರ್ಣೋದ್ಧಾರ ಮತ್ತು ಅನ್ನ ಸಂತರ್ಪಣೆಗಾಗಿ ಮತ್ತು ಸತ್ಪಾತ್ರಕ್ಕೆ ಸಲ್ಲುತ್ತಿದ್ದರೆ ಆ ದಾನವು ಅರ್ಥಪೂರ್ಣವಾಗುತ್ತದೆ. ಬಸವಾದಿ ಶರಣರು ಸಮಾಜೋಧ್ಧಾರಕ, ಸರ್ವಧರ್ಮ, ಸಮನ್ವಯತೆ ಮತ್ತು ಸಮಾನತೆಯ ಸಂದೇಶ ಸಾರಿದರು. ಯಾವುದೇ ವರ್ಗ, ವರ್ಣ, ಲಿಂಗಗಳ ಭೇದವಿಲ್ಲದೇ ಸರ್ವ ಮಾನವ ಶಕ್ತಿಗಳ ಸಮಷ್ಠಿ ಭಾವದಿಂದ ಸಾಮಾಜಿಕ ಪರಿವರ್ತನೆಗಾಗಿ ಹೋರಾಡುತ್ತಾ, ಭಾರತವು ಸರ್ವ ಜನಾಂಗದ ಶಾಂತಿಯ ತೋಟವೆಂಬುದನ್ನು ಎತ್ತಿ ತೋರಿಸಿದರು. ನಾವೆಲ್ಲರೂ ನಮ್ಮ ಪ್ರಾಪಂಚಿಕ ಜಗತ್ತಿನಿಂದ ಹೊರಬಂದು ಅಧ್ಯಾತ್ಮಿಕ ಚಿಂತನೆಗಳಲ್ಲಿ ಭಾಗವಹಿಸಿ ಮನಸ್ಸನ್ನು ಪ್ರಫುಲಿತಗೊಳಿಸಬೇಕು. ಸದಾ ಶರಣರ ಚಿಂತನೆ, ದಾರ್ಶನಿಕರ ತತ್ವ-ಜೀವನೋಪದೇಶಗಳನ್ನು ಅಳವಡಿಸಿಕೊಂಡು ಪುನೀತರಾಗಬೇಕು. ಶರಣರು ತೋರಿದ ಸನ್ಮಾರ್ಗದಲ್ಲಿ ನಡೆಯುತ್ತಾ ಸತ್ಯದ ಅರಿವು, ಅನುಭವ, ಅನುಭಾವ, ಕಾಯಕ, ದಾಸೋಹ ದಂತಹ ಸಾಮಾಜಿಕ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ವೇದಮೂರ್ತಿ ಬಸಯ್ಯಶಾಸ್ತ್ರೀ ಮಠಪತಿ, ಸುವರ್ಣ ಶೆಟ್ಟಿ ಹಾಗೂ ಎಸ್.ಎಸ್.ರಾಚಗೊಂಡ ವೇದಿಕೆಯ ಮೇಲಿದ್ದರು.
ಕಾರ್ಯಕ್ರಮದಲ್ಲಿ ಪ್ರೊ. ಎಂ.ಎಸ್.ಖೊದ್ನಾಪೂರ, ಭರಮಣ್ಣ ಕಡಕೋಳ, ಎಸ್.ಎಸ್.ದೊಡಮನಿ, ಎ.ಬಿ.ಬಿರಾದಾರ, ವೆಂಕಟೇಶ ಹೊಸಮನಿ, ಸಿದ್ದು ಧನಗೊಂಡ, ಶೋಭಾ ಚವ್ಹಾಣ, ಜ್ಯೋತಿ ಹಿರೇಮಠ, ಸುನೀತಾ ಉಮರಾಣಿ, ಗಿರಿಜಾ ಮಠಪತಿ, ಸರಸ್ವತಿ ಬಿರಾದಾರ, ಮಂಜುಳಾ ಜೋಶಿ, ಜ್ಯೋತಿ ಕನಮಡಿ, ಮೀನಾಕ್ಷಿ ಮುಧೋಳ, ಮಂಜುಳಾ ನಿಂಬಾಳಕರ, ಸುರೇಖಾ ನಿಂಬಾಳಕರ, ಶೋಭಾ ಚವ್ಹಾಣ, ಕಸ್ತೂರಿ ಸಾವಳಗಿ ಇನ್ನಿತರರು ಉಪಸ್ಥಿತರಿದ್ದರು.
ಸರೋಜಾ ಬಾಗಲಕೋಟ ಪ್ರಾರ್ಥಿಸಿದರು. ರಾಜಶೇಖರ ಉಮರಾಣಿ ನಿರೂಪಿಸಿದರು.

