ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸರ್ವಸದಸ್ಯರ ವಾರ್ಷಿಕ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಸಮಾಜದಲ್ಲಿ ಬಸವಾದಿ ಶರಣರ ಆಚಾರ-ವಿಚಾರಗಳು, ಧರ್ಮ ಉಳಿಯಬೇಕಾದರೆ ವೀರಶೈವ-ಲಿಂಗಾಯತ ಸಮಾಜ ಬಾಂಧವರು ಒಗ್ಗೂಡುವದು ತುಂಬಾ ಅಗತ್ಯವಿದೆ ಎಂದು ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪರಿಷತ್ತಿನ ಸರ್ವಸದಸ್ಯರ ಮೂವತ್ತೊಂದನೇ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಉಪೇಕ್ಷೆ ಮಾಡದೇ ಬದುಕು ಕಟ್ಟಿಕೊಳ್ಳವುದು ಅನಿವಾರ್ಯ. ಮಾನವೀಯತೆ ಎತ್ತಿಹಿಡಿಯುವದೇ ಧರ್ಮವಾಗಿದೆ. ವೀರಶೈವ-ಲಿಂಗಾಯತ ಧರ್ಮವು ಮಾನವೀಯತೆ ಎತ್ತಿ ಹಿಡಿದ ಧರ್ಮವಾಗಿದೆ.ಇದು ಜಾತ್ಯಾತೀತವಾಗಿ ನಡೆದ ಧರ್ಮವಾಗಿದೆ. ನಮ್ಮಂತಹವರು ರಾಜಕೀಯವಾಗಿ ಬೆಳೆ ಬೇಯಿಸಿಕೊಳ್ಳಲು ಧರ್ಮವನ್ನು ಬಳಸಿಕೊಳ್ಳುತ್ತಾರೆ. ಸಂತರು-ಶರಣರು ಸಮಾಜವನ್ನು ಎಂದಿಗೂ ಒಡೆಯದೇ ಒಗ್ಗೂಡಿಸುವ ಕಾರ್ಯ ಮಾಡಿದ್ದಾರೆ ಎಂದರು.
ಬಸವಾದಿ ಶರಣರ ತತ್ವ ಸಂದೇಶಗಳನ್ನು ನಾಡಿನಲ್ಲಿ ಜನಮಾನಸಕ್ಕೆ ಮುಟ್ಟಿಸುವಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ. ಇಂತಹ ಪರಿಷತ್ತಿಗೆ ಸದಸ್ಯರ ಸಂಖ್ಯೆ ಕಡಿಮೆ ಇರುವದು ವಿಷಾದನೀಯ. ಜನರು ಇದರ ಸದಸ್ಯತ್ವ ಪಡೆದುಕೊಳ್ಳುವ ಮೂಲಕ ನಾಡಿನಲ್ಲಿ ಶರಣರ ಪ್ರಸಾರಕ್ಕೆ ಕೈಜೋಡಿಸಬೇಕಿದೆ ಎಂದರು.
ಯಾವದೇ ಕಾರಣಕ್ಕೂ ಪರಿಷತ್ತು ಸರ್ಕಾರದ ಮುಂದೆ ಕೈಒಡ್ಡುವ ಪ್ರಮೇಯ ಬರಬಾರದು. ನಾನು ಪರಿಷತ್ತಿಗೆ ಇಂದೇ ರೂ.೫ ಲಕ್ಷ ದತ್ತಿ ನಿಧಿ ಕಾಣಿಕೆ ನೀಡುವದಾಗಿ ಹೇಳಿ ಹಣವನ್ನು ಪರಿಷತ್ತಿನ ಗೌರವಾಧ್ಯಕ್ಷ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ರಾಜ್ಯಾಧ್ತಕ್ಷ ಡಾ.ಸಿ.ಸೋಮಶೇಖರ ಅವರಿಗೆ ನೀಡಿದರು.
ಪರಿಷತ್ತಿನ ಗೌರವ ಸಲಹೆಗಾರ, ಹಿರಿಯ ವಿದ್ವಾಂಸ ಗೊರುಚ ಮಾತನಾಡಿ, ನಾಡಿನಲ್ಲಿ ಶರಣ ಸಾಹಿತ್ಯ ಪರಷತ್ತು ನಿರ್ದಿಷ್ಟ ಉದ್ದೇಶ ಹೊಂದಿ ಕಾರ್ಯನಿರ್ವಹಿಸುತ್ತಿದೆ. ನಾಡಿನಲ್ಲಿ ಶರಣ ಸಂಸ್ಕ್ರತಿ ಬಗ್ಗೆ ಜನರು ಬದ್ದತೆಯಿರಬೇಕು. ಯಾರೂ ತೋರಿಕೆ ಉಪದೇಶ ಹೊಂದಬಾರದು. ನಮ್ಮ ಜೀವನದ ಅನೇಕ ಸಮಸ್ಯೆಗಳಿಗೆ ಶರಣರ ವಿಚಾರಗಳು ಪರಿಹಾರ ನೀಡುತ್ತವೆ. ಇಂತಹ ಶರಣರ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿರುವ ಪರಿಷತ್ತಿಗೆ ಸರ್ಕಾರದಿಂದ ಅನುದಾನದ ನೆರವು ಸಿಗುತ್ತಿಲ್ಲ ಎಂಬ ನೋವಿದೆ. ಅದೇ ಕನ್ನಡ ಸಾಹಿತ್ಯ ಪರಿಷತ್ತಿಗೆ ರೂ.೫ ಕೋಟಿ ಸರ್ಕಾರ ಅನುದಾನ ನೀಡುತ್ತದೆ. ಸಾಂಸ್ಕ್ರತಿಕ ನಾಯಕ ಬಸವಣ್ಣ ಎಂದು ಘೋಷಣೆಯಾದರೆ ಸಾಲದು. ಅವರ ತತ್ವಗಳು ಅನುಷ್ಠಾನಕ್ಕೆ ಬರುವಂತಾಗಬೇಕಿದೆ. ಈ ನಿಟ್ಟಿನಲ್ಲಿ ನಾನು ೨೫ ಅಂಶಗಳನ್ನು ಒಳಗೊಂಡಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ. ಇದರ ಬಗ್ಗೆ ಅವರು ಗಮನ ಹರಿಸುವ ವಿಶ್ವಾಸವಿದೆ ಎಂದರು.
ಮಾಜಿ ಸಚಿವೆ ಲೀಲಾವತಿ ಆರ್. ಪ್ರಸಾದ, ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಪರಿಷತ್ತಿನ ಗೌರವಾಧ್ಯಕ್ಷ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಸರ್ಕಾರವು ರೂ.೫೦೦ ಕೋಟಿ ಅನುದಾನದಲ್ಲಿ ಸರ್ಕಾರದಿಂದ ಶಾಶ್ವತ ಬಸವಾದಿ ಶರಣರ ಸಂಸ್ಥೆ ಆರಂಭಿಸಿ ಅದರ ಮೂಲಕ ನಿರಂತರ ಬಸವಾದಿ ಶರಣರ ಕುರಿತು ನಾಡಿನಲ್ಲಿ ಪ್ರಸಾರ ಕಾರ್ಯ ಸರ್ಕಾರ ಮಾಡಬೇಕೆಂದು ಸಿಎಂ ಅವರಿಗೆ ಮನವಿ ಸಲ್ಲಿಸಲಾಗಿದೆ. ಇದರ ಬಗ್ಗೆ ಅವರು ನಿರ್ಣಯ ಕೈಗೊಳ್ಳುವ ಆಶಾಭಾವನೆ ಇದೆ ಎಂದರು.
ಪರಿಷತ್ತಿನ ಪ್ರ.ಕಾರ್ಯದರ್ಶಿ ಸೋಮಶೇಖರ ಗಾಂಜಿ ಅವರು ಸಭೆಯ ತಿಳುವಳಿಕೆ ವಾಚಿಸಿದರು.
ಕೋಶಾಧಿಕಾರಿ ಎಸ್.ಎಂ.ಹಂಪಯ್ಯ ಅವರು ೨೦೨೪-೨೫ ನೇ ಸಾಲಿನ ಲೆಕ್ಕ-ಪತ್ರ, ೨೦೨೫-೨೬ ನೇ ಸಾಲಿನ ಆಯ-ವ್ಯಯ ಮಂಡಿಸಿದರು.
ವೇದಿಕೆಯಲ್ಲಿ ಸಿದ್ದಲಿಂಗಸ್ವಾಮೀಜಿ, ವೀರತೀಶಾನಂದ ಸ್ವಾಮೀಜಿ, ಪರಿಷತ್ತಿನ ರಾಜ್ಯ ಪದಾಧಿಕಾರಿಗಳಾದ ಅಪ್ಪಾರಾವ ಅಕ್ಕೋಣೆ, ಡಾ.ಸಿಂ.ರಾ.ಹೊನ್ನಲಿಂಗಯ್ಯ, ಕೆ.ಎಂ.ವೀರೇಶ, ಶ್ರೀಶೈಲ ಪಟ್ಟಣಶೆಟ್ಟಿ, ಸುಶೀಲಾ ಸೋಮಶೇಖರ, ಪ್ರಕಾಶ ಅಂಗಡಿ, ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ, ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ, ಎಲ್ಲಾ ಜಿಲ್ಲೆಯ ಅಧ್ಯಕ್ಷರು, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಜಿಲ್ಲೆಯ ಎಲ್ಲ ತಾಲೂಕು ಘಟಕದ ಅಧ್ಯಕ್ಷರು ಇತರರು ಇದ್ದರು.
ಕದಳಿ ವೇದಿಕೆ ಸಾವಿತ್ರಿ ಕಲ್ಯಾಣಶೆಟ್ಟಿ ಬಳಗ ವಚನ ಪ್ರಾರ್ಥನೆಗೈದರು. ತಾಲೂಕು ಘಟಕದ ಅಧ್ಯಕ್ಷ ವೀರಣ್ಣ ಮರ್ತುರ ಸ್ವಾಗತಿಸಿದರು. ವಿವೇಕಾನಂದ ಕಲ್ಯಾಣಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಡಾ.ಯುವರಾಜ ಮಾದನಶೆಟ್ಟಿ ನಿರೂಪಿಸಿದರು. ಆರ್.ಜಿ.ಅಳ್ಳಗಿ ವಂದಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪರಿಷತ್ತಿನಲ್ಲಿ ಉತ್ತಮ ಸಾಧನೆ ಮಾಡಿದ ಬಸವನಬಾಗೇವಾಡಿ ಘಟಕದ ಅಧ್ತಕ್ಷ ವೀರಣ್ಣ ಮರ್ತುರ, ಮುದ್ದೇಬಿಹಾಳ ಕದಳಿ ವೇದಿಕೆ ಅಧ್ಯಕ್ಷೆ ಕಾಶೀಬಾಯಿ ರಾಂಪೂರ ಅವರಿಗೆ ಬಸವ ರಾಜೇಂದ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

