ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಶಿಕ್ಷಕರು ಪಣ ತೊಡಬೇಕು, ಶಿಸ್ತು ಬದ್ದವಾಗಿ ಮಕ್ಕಳಿಗೆ ಕಲಿಸಬೇಕು ಎಂದು ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು.
ತಾಲ್ಲೂಕಿನ ಕೋಟ್ಯಾಳ ಗ್ರಾಮದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣವಲಯ ವಿಜಯಪುರ ವತಿಯಿಂದ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯನ್ನು ಪ್ರೌಢ ಶಾಲೆಯಾಗಿ ಉನ್ನತಿಕರಿಸಿ ಒಂಬತ್ತನೇ ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
2025-26 ನೇ ಸಾಲಿನಲ್ಲಿ ವಿಜಯಪುರ ಗ್ರಾಮೀಣ ತಾಲ್ಲೂಕಿನ ಬಬಲೇಶ್ವರ ಮತಕ್ಷೇತ್ರದಲ್ಲಿ ಸಚಿವರಾದ ಎಂ. ಬಿ. ಪಾಟೀಲ ಅವರ ಶೈಕ್ಷಣಿಕ ಕ್ರಾಂತಿ ಹಾಗೂ ಅವರ ಇಚ್ಚಾ ಶಕ್ತಿಯಿಂದ ಹೊನವಾಡ, ಕೋಟ್ಯಾಳ, ಸಿದ್ದಾಪೂರ(ಅ), ತಿಗಣಿಬಿದರಿ, ನಿಡೋಣಿ, ಕಾತ್ರಾಳ ಒಟ್ಟು ಆರು ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಿಸಿರುವರು ಎಂದರು.
ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಮಧ್ಯದಲ್ಲಿ ಶಾಲೆ ಬಿಡುವದು, ಬಾಲ್ಯ ವಿವಾಹ ತಡೆಗಟ್ಟಲು , ಬಡವರ ಹಾಗೂ ಹಿಂದುಳಿದ ಕುಟುಂಬಗಳಿಗೆ ಶಿಕ್ಷಣ ಒದಗಿಸಲು ಸರ್ಕಾರ ಪ್ರೌಢ ಶಾಲೆಯಾಗಿ ಉನ್ನತಿಕರಿಸಿದೆ ಎಂದರು.
ಸಚಿವರ ಆಪ್ತ ಕಾರ್ಯದರ್ಶಿ ಬಿ.ಎನ್ ಬೋಸಲೆ ಮಾತನಾಡಿ ಈ ಗ್ರಾಮಸ್ಥರ ಸುಮಾರು ಇಪ್ಪತ್ತು ವರ್ಷಗಳ ಪರಿಶ್ರಮದಿಂದ ಹಾಗೂ ಸಚಿವರ ಕಾಳಜಿಯಿಂದ ಈ ಗ್ರಾಮದ ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಈ ವರ್ಷ ಒಂಬತ್ತನೇ ತರಗತಿಯನ್ನು ಪ್ರಾರಂಭ ಮಾಡಿಸಿರುವದು ಅತೀ ಸಂತೋಷ ಪಡುವ ವಿಷಯವಾಗಿದೆ. ಈ ಶಾಲೆಗೆ ಈಗಾಗಲೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿ. ಎಸ್. ಆರ್ ಅನುದಾನದಲ್ಲಿ ₹ 1 ಕೋಟಿಗಿಂತ ಹೆಚ್ಚಿನ ಅನುದಾನದಲ್ಲಿ ಸುಸಜ್ಜಿತವಾದ 10 ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕ ಸಂತೋಷ ಲೋಕೂರ, ಶಿಕ್ಷಣ ಸಂಯೋಜಕ ಜಿ.ಟಿ. ಕಾಗವಾಡ, ಪ್ರಭು ಬಿರಾದಾರ, ಸಿಆರ್ಪಿ ಸುಜಾತಾ ಬಾಗಲಕೋಟ, ಮುಖ್ಯೋಪಾಧ್ಯಾಯ ಸಿ.ಆರ್.ಝಂಡೆ, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.