೭೯ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಾಸಕ ಅಶೋಕ ಮನಗೂಳಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸ್ವತಂತ್ರ ಪೂರ್ವದಲ್ಲಿ ೨೦೦ವರ್ಷಗಳ ಕಾಲ ಆಳಿದ ಬ್ರಿಟಿಷರ ವಿರುದ್ಧ ಶಾಂತಿ ಮತ್ತು ಕ್ರಾಂತಿಯಿಂದ ದೇಶಕ್ಕಾಗಿ ಹೋರಾಡಿದ ಹೋರಾಟಗಾರರನ್ನು, ವೀರಯೋಧರನ್ನು ಇಂದು ನಾವೆಲ್ಲರೂ ಸ್ಮರಿಸಿಕೊಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ೭೯ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಭಾರತವು ಇಂದು ಸಧೃಡವಾಗಿ, ಆರ್ಥಿಕವಾಗಿ ಸಬಲವಾಗಿದೆ ಎಂದರೆ ಅದಕ್ಕೆ ಕಾರಣ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ. ದೇಶಾಭಿಮಾನ, ರಾಷ್ಟ್ರಾಭಿಮಾನ ನಮ್ಮ ರಕ್ತದ ಕಣ ಕಣದಲ್ಲೂ ಅಳವಡಿಸಿಕೊಳ್ಳುವ ಮೂಲಕ ರಾಷ್ಟ್ರ ಪ್ರೇಮಿಯಾಗಿ ಮೆರೆಯಬೇಕು ಎಂದರು.
ಈ ವೇಳೆ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಮಾತನಾಡಿ, ಸಿಂದಗಿ ನೆಲದಲ್ಲಿ ಆದರ್ಶ ವ್ಯಕ್ತಿಗಳಾಗಿ, ಮಹನೀಯರು ಹುಟ್ಟಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಸಿಂದಗಿಯ ಹೆಸರನ್ನು ಬೆಳೆಸಿದ ಮಹನೀಯರನ್ನು ಅಜರಾಮರವಾಗಿಸುವ ನಿಟ್ಟಿನಲ್ಲಿ ಪುರಸಭೆ ವತಿಯಿಂದ ಪಟ್ಟಣದ ಪ್ರಮುಖ ರಸ್ತೆಗಳಿಗೆ ಸಾಧಕರ ಹೆಸರನ್ನಿಡಲಾಗುವುದು. ಸಿಂದಗಿ ಕೆರೆಗೆ ನೀರು ಹರಿಸಿ ಆಧುನಿಕ ಭಗೀರಥರಾದ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರ ಹೆಸರನ್ನು ಸಿಂದಗಿ ಕೆರೆಗೆ ಇಡಲಾಗಿದೆ ಎಂದರು.
ಈ ವೇಳೆ ಸರಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಓದಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಕರೆಪ್ಪ ಬೆಳ್ಳಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪಟ್ಟಣದ ಪ್ರಮುಖ ರಸ್ತೆಗಳಿಗೆ ಸಾಧಕರ ಹೆಸರನ್ನಿಡಲು ನಾಮಕರಣದ ಫಲಕ ಹಾಗೂ ಮೂರು ಜನ ವಿಶೇಷ ಚೇತನರಿಗೆ ತ್ರಿಚಕ್ರ ವಾಹನವನ್ನು ಶಾಸಕ ಅಶೋಕ ಮನಗೂಳಿ ಹಾಗೂ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ವಿತರಣೆ ಮಾಡಿದರು.
ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಗೃಹರಕ್ಷಕ ದಳ ಸೇರಿದಂತೆ ವಿವಿಧ ಶಾಲಾ ಮಕ್ಕಳಿಂದ ನಡೆದ ಕವಾಯತ್‌ನ್ನು ತೆರೆದ ವಾಹನದಲ್ಲಿ ಶಾಸಕರು ವೀಕ್ಷಿಸಿದರು.
ಈ ವೇಳೆ ತಾಪಂ ಇಓ ರಾಮು ಅಗ್ನಿ, ಸಿಪಿಐ ನಾನಾಗೌಡ ಪೊಲೀಸ್‌ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಎಸ್.ರಾಜಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ, ನೌಕರರ ಸಂಘದ ತಾಲೂಕಾಧ್ಯಕ್ಷ ಅಶೋಕ ತೆಲ್ಲೂರ, ಯೋಜನಾ ಪ್ರಾಧಿಕಾರ ಅದ್ಯಕ್ಷ ಬಸವರಾಜ ಕಾಂಬಳೆ ವೇದಿಕೆಯ ಮೇಲಿದ್ದರು.
ದೈ.ನಿರ್ದೇಶಕ ಡಾ.ರವಿ ಗೋಲಾ, ಶಿಕ್ಷಕ ಎಂ.ಆರ್.ಡೋಣಿ ನಿರೂಪಿಸಿದರು.

