ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ೨೦೨೬-೨೭ನೇ ಸಾಲಿನ ನೇಕಾರ ಸಮ್ಮಾನ್ ಯೋಜನೆ ಅಡಿಯಲ್ಲಿ ಜಿಲ್ಲೆಯ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನೇಕಾರರಿಗೆ ವಾರ್ಷಿಕ ರೂ.೫,೦೦೦ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
೨೦೨೫-೨೬ನೇ ಸಾಲಿನಲ್ಲಿ ಯೋಜನೆಯ ಸೌಲಭ್ಯ ಪಡೆದ ನೇಕಾರರಲ್ಲಿ ಪ್ರಸ್ತುತ ನೇಕಾರಿಕೆ ಚಟುವಟಿಕೆಯಲ್ಲಿ ತೊಡಗಿರುವ ಹಾಗೂ ಪಿಎಂಜೆಜೆಬಿವೈ ಅಥವಾ ಪಿಎಂಎಸ್‌ಬಿವೈ ಯೋಜನೆಯಡಿ ಕಡ್ಡಾಯವಾಗಿ ನೋಂದಾಯಿಸಿಕೊಂಡಿರುವ ಅರ್ಹ ನೇಕಾರರು ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ಕಳೆದ ಸಾಲಿನಲ್ಲಿ ನೋಂದಣಿ ಮಾಡಿಸದ ಅರ್ಹ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರೂ ಹೊಸದಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ ೨೨ ಕೊನೆಯ ದಿನವಾಗಿದೆ.
ಹೊಸ ಅರ್ಜಿದಾರರು ನಿಗದಿತ ಅರ್ಜಿ ನಮೂನೆ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ನೇಕಾರ ಸಮ್ಮಾನ್ ಐಡಿ ಅಥವಾ ಪೆಹಚಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ನೇಕಾರರ ಗುರುತಿನ ಚೀಟಿ, ನೇಕಾರಿಕೆ ವೃತ್ತಿಯಲ್ಲಿ ತೊಡಗಿರುವುದಕ್ಕೆ ಸಮರ್ಥನೆಯಾಗಿ ಭಾವಚಿತ್ರ ಹಾಗೂ ಪಿಎಂಜೆಜೆಬಿವೈ-ಪಿಎಂಎಸ್‌ಬಿವೈ ನೋಂದಣಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು.
ಅರ್ಹ ನೇಕಾರರು ತಮ್ಮ ವಿವರಗಳನ್ನು ಸ್ಥಳೀಯ ಕೈಮಗ್ಗ ಅಭಿವೃದ್ಧಿ ನಿಗಮ, ನೇಕಾರ ಸಹಕಾರ ಸಂಘಗಳ ಮೂಲಕ ಅಥವಾ ನೇರವಾಗಿ ಸಹಾಯಕ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಡಿಐಸಿ ಕಂಪೌಂಡ್, ಶಿಖಾರಖಾನೆ, ವಿಜಯಪುರ ಇವರಿಗೆ ಜುಲೈ ೨೨ರೊಳಗಾಗಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊ.೯೯೦೨೫೬೧೪೪೧ ಸಂಪರ್ಕಿಸಬಹುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
