ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಶಿಕ್ಷಣ ಸಂಸ್ಥೆಗಳನು ಕಟ್ಟಿ ಬೆಳೆಸುವ ಕಾರ್ಯ ಸಾಧಾರಣವಲ್ಲ. ಇಂಥ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಲ್.ಆರ್.ಅಂಗಡಿ ಹೇಳಿದರು.
ಪಟ್ಟಣದ ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ಕಾಲೇಜು ಆವರಣದಲ್ಲಿ ಬುಧವಾರ ಜರುಗಿದ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕ ರೂಪದಲ್ಲಿ ಪಾರಿತೋಷಕ ವಿತರಣೆ ಮಾಡಿ ಮಾತನಾಡಿದರು.
ಕೇವಲ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಆರಂಭದಿಂದ ಏಳಿಗೆ ಅಸಾಧ್ಯ. ಸಂಸ್ಥೆಗಳನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಿದಲ್ಲಿ ಮಾತ್ರ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಸಾರ್ಥಕತೆ ದೊರಕಿದಂತಾಗುತ್ತದೆ. ಅದಕ್ಕಾಗಿ ಶಿಕ್ಷಕ ಸಮೂಹದ ಜೊತೆಗೆ ಪಾಲಕ ಬಂಧುಗಳು ಕೈಜೋಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಿಸಲಾಯಿತು. ನಂತರ ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಲಾಯಿತು. ನಂತರ ಬ್ಯಾಂಕಾಕ್‌ನಲ್ಲಿ ಜರುಗಿದ ೧೦ನೇ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಗೌರವಯುತ ಸುಸ್ಥಿರ ಶಿಕ್ಷಣ ಅಭಿವೃದ್ಧಿ ಹರಿಕಾರ ಪ್ರಶಸ್ತಿಗೆ ಭಾಜನರಾದ ಅಧ್ಯಕ್ಷರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.
ಪ್ರಾಚಾರ್ಯ ಎಸ್.ಡಿ.ರಜಪೂತ, ಮುಖ್ಯಶಿಕ್ಷಕ ಎನ್.ಎಲ್.ಅಂಗಡಿ, ಪ್ರಕಾಶ ನಾಯಿಕ್, ಎಂ.ಎನ್.ಪತ್ತಾರ, ಎಸ್.ಎಸ್.ಸೊನ್ನದ, ಡಿ.ಎಸ್.ಚಳಗೇರಿ, ಪಿ.ಎನ್.ರಾಠೋಡ, ಎಂ.ಎಸ್.ಮಜ್ಜಿಗಿ, ಎಸ್.ಎನ್.ಬಿರಾದಾರ. ಎಮ್.ಎನ್.ಚವ್ಹಾಣ. ನಾಗರಾಜ ಅಂಗಡಿ ಹಾಗೂ ಸಿಬ್ಬಂದಿ ಇದ್ದರು.

