ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿನ ಬೀಜ ಮಾರಾಟ ಮಳಿಗೆಗಳು, ಕೃಷಿ ಸೇವಾ ಕೇಂದ್ರಗಳು ಹಾಗೂ ಕೃಷಿ ಸಂಬಂಧಿತ ವಹಿವಾಟು ನಡೆಸುತ್ತಿರುವ ಅರ್ಹ ವ್ಯಾಪಾರಿಗಳು ಬಿತ್ತನೆ ಬೀಜ ಮಾರಾಟಕ್ಕೆ ಅಗತ್ಯವಾದ ಬೀಜ ಮಾರಾಟ ಪರವಾನಗಿ (ಸೀಡ್ ಲೈಸೆನ್ಸ್) ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಬೀಜ ಕಾಯ್ದೆ-೧೯೬೬ ಹಾಗೂ ಬೀಜ ನಿಯಮ-೧೯೬೮ರ ಅನ್ವಯ ರೈತರಿಗೆ ಗುಣಮಟ್ಟದ ಮತ್ತು ಪ್ರಮಾಣಿತ ಬೀಜಗಳನ್ನು ಮಾತ್ರ ಮಾರಾಟ ಮಾಡಬೇಕು.ಅದರಂತೆ ತರಕಾರಿ ಮತ್ತು ಹೂವಿನ ಬೀಜಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರು ಬೀಜಗಳ ನಿಯಂತ್ರಣ ಆದೇಶ-೧೯೮೩ರ ಪ್ರಕಾರ ತೋಟಗಾರಿಕೆ ಇಲಾಖೆಯಿಂದ ಬೀಜ ಮಾರಾಟ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ.
ಆದ್ದರಿಂದ ಜಿಲ್ಲೆಯಲ್ಲಿನ ಎಲ್ಲಾ ಬೀಜ ಮಾರಾಟ ವ್ಯಾಪಾರಿಗಳು ಜುಲೈ ೧೫ರೊಳಗಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಬೀಜ ಮಾರಾಟ ಪರವಾನಗಿ ಪತ್ರವನ್ನು ಪಡೆಯಬೇಕು. ಪರವಾನಗಿ ಪಡೆಯದೇ ಬೀಜ ಮಾರಾಟ ನಡೆಸುತ್ತಿರುವುದು ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಪರವಾನಗಿ ಪಡೆಯಲು ಅರ್ಜಿ ನಮೂನೆ ಜೊತೆಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಜಿಎಸ್‌ಟಿ ನೋಂದಣಿ ಪ್ರಮಾಣಪತ್ರ, ಬೀಜ ಉತ್ಪಾದನಾ ಸಂಸ್ಥೆಯಿಂದ ಪಡೆದ ಬೀಜ ಮೂಲ ಪ್ರಮಾಣಪತ್ರ, ಮಳಿಗೆಯ ಸ್ವಂತ ಅಥವಾ ಬಾಡಿಗೆ ದಾಖಲಾತಿಗಳು, ನಗರಸಭೆ ಅಥವಾ ಗ್ರಾಮ ಪಂಚಾಯಿತಿಯಿಂದ ಪಡೆದ ಮಳಿಗೆ ನೋಂದಣಿ ಪ್ರಮಾಣಪತ್ರ ಹಾಗೂ ಇತ್ತೀಚಿನ ತೆರಿಗೆ ಪಾವತಿ ರಶೀದಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆಯೂ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಮೀಪದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.
