ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಚಾಂದಕವಠೆ ಗ್ರಾಮದ ಐಪಿಎಸ್ ಅಧಿಕಾರಿ ಚೆನ್ನಬಸವಣ್ಣ ಲಂಗೋಟಿ ಅವರು ೨೦೨೬ನೇ ಸಾಲಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಪ್ರಶಂಸಾ ಪದಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಸ್ತುತ ಮೈಸೂರಿನ ಪೊಲೀಸ್ ಅಕಾಡೆಮಿಯ ನಿರ್ದೇಶಕರಾಗಿರುವ ಇವರು ಬೆಳಗಾವಿ, ಬೆಂಗಳೂರು, ಬೀದರ್ ನಲ್ಲಿ ಸೇವೆ ಸಲ್ಲಿಸಿದ್ದಾರೆ. ಮಹಿಳಾ ಸಮುದಾಯದ ಸುರಕ್ಷತೆಗಾಗಿ ಇವರು ಬೀದರ ಜಿಲ್ಲೆಯಲ್ಲಿ ಸ್ಥಾಪಿಸಿದ ಅಕ್ಕ ಪಡೆ ಅತ್ಯಂತ ಜನಪ್ರಿಯಗೊಂಡು ರಾಜ್ಯವ್ಯಾಪ್ತಿ ಬಳಸಲಾಗುತ್ತಿದೆ. ಅಲ್ಲದೇ ದಕ್ಷಿಣ ಸುಡಾನ್‌ನಲ್ಲಿ ವಿಶ್ವ ಸಂಸ್ಥೆಯ ಪೊಲೀಸ್ ಸಲಹೆಗಾರರಾಗಿ ಹಾಗೂ ಕಾರ್ಯಾಚರಣೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಅಂತರ್‌ರಾಷ್ಟ್ರೀಯ ಅನುಭವ ತಮ್ಮದಾಗಿಸಿಕೊಂಡಿದ್ದಾರೆ. ಕವಿ, ಸಾಹಿತಿ, ಬರಹಗಾರರಾಗಿ ಗುರುತಿಸಿಕೊಂಡಿರುವ ಚೆನ್ನಬಸಪ್ಪ ಲಂಗೋಟಿ ಇವರ ಸೇವಾ ದಕ್ಷತೆ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಜಾನಪದ ಸಾಹಿತಿ ಇನ್ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟಿ, ಆರಕ್ಷಕ ಬರಹಗಾರ ಮೌಲಾಲಿ ಆಲಗೂರ, ಶಿಕ್ಷಕ ಶರಣು ಲಂಗೋಟಿ ಸೇರಿದಂತೆ ತಾಲೂಕಿನ ಜನತೆ ಹರ್ಷವ್ಯಕ್ತಪಡಿಸಿದೆ

