ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ರವಿವಾರ ಮದ್ಯಾಹ್ನ ೩ ಗಂಟೆ ಸುಮಾರಿಗೆ ಕಲಬುರಗಿ ಅಫಜಲ್ಪುರ ರಾಷ್ಟ್ರೀಯ ಹೆದ್ದಾರಿ ೧೫೦ಇ ನಲ್ಲಿ ಗೊಬ್ಬೂರ(ಕೆ) ಗ್ರಾಮದ ಬಳಿ ಕಾರು ಮತ್ತು ಸಾರಿಗೆ ಬಸ್ಸಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಇಬ್ಬರು ತಂದೆ, ಮಗ ಮೃತ ಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಸೋಮಶೇಖರ ಶಂಕ್ರಪ್ಪ ಭಾಸಗಿ(೫೮) ಹಾಗೂ ಪ್ರಕಾಶ ಸೋಮಶೇಖರ ಬಾಸಗಿ(೨೮) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ರೂಪಾ ಸೋಮಶೇಖರ ಭಾಸಗಿ ಅವರಿಗೆ ತೀವ್ರ ಗಾಯಗಳಾಗಿದ್ದು ಕಲಬುರಗಿ ನಗರದ ಮೇಟ್ರೋ ಪ್ಲಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತ ಸೋಮಶೇಖರ ಭಾಸಗಿ ಅವರು ಕುಟುಂಬ ಸಮೇತ ಕಲಬುರಗಿಯಲ್ಲಿನ ರಾಣಾಜ್‌ಪೀರ್ ದರ್ಗಾ ದರ್ಶನ ಮುಗಿಸಿಕೊಂಡು ತಮ್ಮ ಊರಾದ ಬಾಗಲಕೋಟ ಜಿಲ್ಲೆಯ ಬೀಳಗಿ ಪಟ್ಟಣಕ್ಕೆ ಹೊರಟಿದ್ದರೆಂದು ಮಾಹಿತಿ ಲಭ್ಯವಾಗಿದೆ.
ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಹೆಚ್ಚುವರಿ ಎಸ್.ಪಿ ಮಹೇಶ ಮೇಘಣ್ಣವರ್, ಡಿವೈಎಸ್‌ಪಿ ತಮ್ಮಾರಾಯ ಪಾಟೀಲ್, ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್‌ಐ ಸಂಗೀತಾ ಸಿಂಧೆ ಸಿಬ್ಬಂದಿಗಳಾದ ಸಂಗಣ್ಣ ವಾಲಿಕಾರ, ಶಿವು ಮಲ್ಲಾಬಾದ, ವಿಠ್ಠಲ್ ಹೂಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

