ಜೂ.30 ರಿಂದ ಜುಲೈ 30 ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ
ಉದಯರಶ್ಮಿ ದಿನಪತ್ರಿಕೆ
ಅಥಣಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಜೂನ್ 30 ರಿಂದ ಆರಂಭವಾಗಿದ್ದು, ಜುಲೈ 29 ರವರೆಗೆ ಅಂದರೆ ಒಂದು ತಿಂಗಳ ಕಾಲ ಪ್ರಗತಿಯಲ್ಲಿರುತ್ತದೆ, ತಾಲೂಕಿನ ಮತದಾರರು ನಿಮ್ಮ ಮನೆಗೆ ಬರುವ ಮತಗಟ್ಟೆಯ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಮತ್ತು ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ದೋಷರಹಿತ ಮತಪಟ್ಟಿ ಶುದ್ಧತೆಗೆ ಸಹಕರಿಸಬೇಕು ಎಂದು ಅಥಣಿ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಿ ಅಧಿಕಾರಿ ಹಾಗೂ ತಹಸಿಲ್ದಾರ್ ಸಿದರಾಯ ಬೋಸಗಿ ಹೇಳಿದರು.
ಅವರು ಮಂಗಳವಾರ ಇಲ್ಲಿನ ಮಿನಿ ವಿಧಾನಸೌಧ, ತಹಸೀಲ್ದಾರ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಒಂದು ತಿಂಗಳ ಕಾಲ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಜರುಗುತ್ತಿದ್ದು, ಜೂನ್ 30 ರಿಂದ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ, ಹೊಸ ಹೆಸರು ಸೇರ್ಪಡೆ, ಅನರ್ಹರ ಹೆಸರು ತೆಗೆದುಹಾಕುವುದು ಮತ್ತು ತಿದ್ದುಪಡಿ ಮಾಡುವ ಮೂಲಕ ಪಟ್ಟಿಯನ್ನು ನವೀಕರಿಸಲಿದ್ದಾರೆ.
ಅಥಣಿ ವಿಧಾನಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ 260 ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದ್ದು, 2 ಲಕ್ಷ 43 ಸಾವಿರ 842 ಮತದಾರರ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಇದಲ್ಲದೆ ತಾಲೂಕ ಸ್ವೀಪ್ ಸಮಿತಿ, ಮುತ್ತು ಗ್ರಾಮಮಟ್ಟದ ಅಧಿಕಾರಿಗಳಿಂದ ವಿಶೇಷ ಪರಿಷ್ಕರಣೆ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ 2 ಲಕ್ಷ 31 ಸಾವಿರ 94 ಮತದಾರರ ಮ್ಯಾಪಿಂಗ್ ಮತ್ತು ಪ್ರೊಜಿನ್ ಮ್ಯಾಪಿಂಗ್ ಮಾಡಲಾಗಿದೆ. ಮತಗಟ್ಟೆಯ ಅಧಿಕಾರಿಗಳಿಗೆ ತಾಂತ್ರಿಕ ಮತ್ತು ಆಡಳಿತಾತ್ಮಕ ನೆರವು, ಡಿಜಿಟಲ್ ಸೇವೆಗಳ ಕುರಿತು ಈಗಾಗಲೇ ಮಾರ್ಗದರ್ಶನ ನೀಡಲಾಗಿದೆ ಎಂದರು.
Hide quoted text
ವೇಳಾಪಟ್ಟಿಯಂತೆ ಅಧಿಕಾರಿಗಳ ಭೇಟಿ :
ಈ ಪ್ರಕ್ರಿಯೆಯು ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ. ಮನೆಗೆ ಭೇಟಿ ನೀಡುವ ಅಧಿಕಾರಿಗಳು ನಿಗದಿತ ನಮೂನೆಗಳನ್ನು ನೀಡಿ ಭರ್ತಿ ಮಾಡಿಸಿಕೊಂಡು ವಾಪಸ್ ಪಡೆದುಕೊಳ್ಳುತ್ತಾರೆ. ಹೊಸ ಹೆಸರುಗಳ ಸೇರ್ಪಡೆ ಮಾಡಿ, ನಿಧನರಾದವರು, ಮನೆ ಖಾಲಿ ಮಾಡಿದವರ ಹೆಸರನ್ನು ಮತಪಟ್ಟಿಯಿಂದ ಕೈಬಿಟ್ಟು ಪರಿಷ್ಕರಣೆ ಮಾಡಲಾಗುತ್ತದೆ. ಎರಡೆರೆಡು ಕಡೆ ಹೆಸರು ಇದ್ದಲ್ಲಿ ಒಂದು ಕಡೆ ಮಾತ್ರ ಉಳಿಸುವ ಪ್ರಕ್ರಿಯೆ ನಡೆಯುತ್ತದೆ. ಗುರುತಿನ ಚೀಟಿಯಲ್ಲಿ ಏನಾದರೂ ದೋಷಗಳು ಇದ್ದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಲು ಕೂಡ ಅವಕಾಶವಿದೆ.
ನಮೂನೆಗಳಲ್ಲಿ ಮಾಹಿತಿ ಒದಗಿಸಬೇಕು:
ಮನೆಗೆ ಬರುವ ಬಿಎಲ್‌ಒಗಳು ಎರಡು ಅರ್ಜಿಗಳನ್ನು (ಎನ್ಯುಮರೇಷನ್ ಫಾರ್ಮ್) ನೀಡುತ್ತಾರೆ. ಮತದಾರರು ಎರಡನ್ನು ಭರ್ತಿ ಮಾಡಿ ಸಹಿ ಮಾಡಬೇಕು. ಬಿಎಲ್‌ಒ ಕೂಡ ಆ ಎರಡು ಫಾರ್ಮ್‌ಗಳ ಮೇಲೆ ಸಹಿ ಮಾಡುತ್ತಾರೆ. ಒಂದನ್ನು ಸ್ವೀಕೃತಿ ಪ್ರತಿಯಾಗಿ ಮತದಾರರಿಗೆ ಮರಳಿಸಿದರೆ, ಇನ್ನೊಂದು ಪ್ರತಿಯನ್ನು ಅಧಿಕಾರಿಗಳು ಕೊಂಡೊಯ್ಯುತ್ತಾರೆ. ನಂತರ ಅದನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಸಂಗ್ರಹ ಮಾಡುತ್ತಾರೆ ಎಂದರು
ಪಾರದರ್ಶಕ ಮತ್ತು ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸುವ ಉದ್ದೇಶದಿಂದ ಈ ಪರಿಷ್ಕರಣೆ ಕಾರ್ಯ ಜರುಗುತ್ತಿದ್ದು, ಮತದಾನ ಹಕ್ಕು ಹೊಂದಿರುವ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ, ತಮ್ಮ ನಿಖರವಾದ ಮಾಹಿತಿಯನ್ನು ಸರಿಯಾಗಿ ದಾಖಲಿಸಿ ಕೊಳ್ಳುವಂತೆ ಮನವಿ ಮಾಡಿದರು.
ಯಾವುದೇ ಆತಂಕ ಬೇಡ, ಸುಳ್ಳು ಸುದ್ದಿಗೆ ಕಿವಿಗೊಡಬೇಡಿ
ಭಾರತ ಚುನಾವಣಾ ಆಯೋಗ ನಡೆಸುತ್ತಿರುವ ಈ ಮತದಾರ ಪಟ್ಟಿ ಪರಿಷ್ಕರಣೆಯ ಬಗ್ಗೆ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ಆತಂಕ ಪಡದೆ, ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಗಬಾರದು. ಮತದಾರ ಪಟ್ಟಿ ಪರಿಷ್ಕರಣೆ ಮಾಡಿಕೊಳ್ಳುವುದರಿಂದ ಸರ್ಕಾರದ ಯಾವುದೇ ಸೌಲತ್ತು ಪಡೆದುಕೊಳ್ಳಲು ತೊಂದರೆ ಇಲ್ಲ. ಮತದಾರ ಪಟ್ಟಿಯಲ್ಲಿ ಹೆಸರು ಇಲ್ಲದೆ ಇರುವ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ದೊರಕುವುದಿಲ್ಲ, ಅದಕ್ಕಾಗಿ ಎಲ್ಲರೂ ಕಡ್ಡಾಯವಾಗಿ ಮತಗಟ್ಟೆ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಪರಿಷ್ಕರಣಿಯ ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡಿದರು.

