ಮೂಕಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ರೈತರಿಗೆ ವಂಚನೆಯ ಆರೋಪ
ಉದಯರಶ್ಮಿ ದಿನಪತ್ರಿಕೆ
ತಾಳಿಕೋಟಿ: ತಾಲ್ಲೂಕಿನ ಮೂಕಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಸನ್ ೨೦೧೯-೨೦೨೬ರವರೆಗೆ ಬೆಳೆವಿಮೆ ತುಂಬಿದ ರೈತರಿಗೆ ವಿಮೆ ಹಣ ದೊರೆಯದಂತೆ ಅಧಿಕಾರಿಗಳು ವ್ಯವಸ್ಥಿತವಾಗಿ ವಂಚನೆ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಆರೋಪಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮಂಗಳವಾರ ತಾಲ್ಲೂಕು ಮೂಕಿಹಾಳ ಗ್ರಾಪಂ ಸಮೀಪದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸನ್ ೨೦೧೯-೨೦-೨೦೨೦-೨೧-೨೦೨೧-೨೨ ಮುಂಗಾರು ಹಂಗಾಮು, ೨೦೨೨-೨೩ರ ಹಿಂಗಾರು ಹಂಗಾಮು,೨೦೨೪-೨೫ರಲ್ಲಿ ಹಿಂಗಾರು ಹಂಗಾಮಿನಲ್ಲಿ ರೈತರಿಗೆ ಬೆಳೆವಿಮೆ ಪರಿಹಾರ ಬಂದಿಲ್ಲವೆಂದು ಅಧಿಕಾರಿಗಳೇ ಮಾಹಿತಿ ನೀಡುತ್ತಿದ್ದಾರೆ. ಬೆಳೆವಿಮೆಗೆ ಕಂತು ಪಾವತಿಸಿದ ರೈತರ ಜಮೀನುಗಳಿಗೆ ಹೋಗಬೇಕಾದ ಅಧಿಕಾರಿಗಳು ಎಲ್ಲೋ ಕೂತು ಬೆಳೆ ಸರ್ವೆ ಮಾಡುತ್ತಾರೆ. ಇದರಲ್ಲಿ ದೊಡ್ಡ ವ್ಯವಸ್ಥಿತ ಮೋಸ ಅಡಗಿದೆ. ಗ್ರಾಮ ಪಂಚಾಯಿತಿಯ ನಾಲ್ವರು ಸಿಬ್ಬಂದಿಯೇ ರೈತನೊಬ್ಬನ ಜಮೀನಿಗೆ ಹೋಗಿ ಬೆಳೆ ಸಮೀಕ್ಷೆ ಮಾಡಿದ್ದಾಗಿ ತೋರಿಸುತ್ತಾರೆ. ಒಟ್ಟಾರೆ ಈ ಭಾಗದಲ್ಲಿ ಬೆಳೆವಿಮೆಯನ್ನು ರೈತರಿಗೆ ತಲುಪಿಸದೇ ವಂಚಿಸಲಾಗಿದೆ. ಅಧಿಕಾರಿಗಳಿಂದ ಸಮಗ್ರ ಮಾಹಿತಿ ತರಿಸಿಕೊಂಡು ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.
ಮೂಕಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹುಹಳ್ಳಿ ಕುಡಿವ ನೀರಿನ ಯೋಜನೆ ಅಡಿ ಶಿವಪೂರ, ನಾಗೂರ, ಹರನಾಳ, ಹಡಗಿನಾಳ ಗ್ರಾಮಗಳಿಗೆ ಇವತ್ತಿಗೂ ಕುಡಿಯುವುದಕ್ಕೆ ನೀರು ಪೂರೈಕೆ ಆಗುತ್ತಿಲ್ಲ ಆರ್‌ಡಬ್ಲುಎಸ್ ಅಧಿಕಾರಿಗಳು ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಸಂಪೂರ್ಣ ಹಳ್ಳ ಹಿಡಿಯುವಂತೆ ಮಾಡಿದ್ದಾರೆ. ಈ ಗ್ರಾಪಂ ಪ್ಯಾಪ್ತಿಯಲ್ಲಿ ೧೦ ಶುದ್ದ ಕುಡಿಯುವ ನೀರಿನ ಘಟಕಗಳಿವೆ ಯಾವವು ಚ್ಯಾಲು ಇಲ್ಲಾ ಎಲ್ಲವೂ ಬಂದ್ ಬಿದ್ದು ತುಕ್ಕು ಹಿಡಿದು ಹೋಗಿವೆ ಎಂದು ಶಾಂತಗೌಡ ನಡಹಳ್ಳಿ ಆರೋಪಿಸಿದರು. ಇದನ್ನು ಮೂಕಿಹಾಳ ಗ್ರಾಪಂ ಪಿಡಿಒ ಎಸ್.ಆಯ್.ಗುಂಡಣ್ಣವರ ಒಪ್ಪಿಕೊಂಡರು.
ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಅಧಿಕಾರಿಗಳು ರೈತರ ರಕ್ತ ಕುಡಿಯುವುದಕ್ಕೆ ಹುಟ್ಟಿದ್ದಾರೆಯೇ ಹೊರತು ಉದ್ಧಾರ ಮಾಡುವುದಕ್ಕಲ್ಲ. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮದೊಂದೇ ಕ್ಷೇತ್ರಕ್ಕೆ ಸೀಮಿತವಾಗಿ ಇದ್ದಾರೆ. ಎಂಟು ಕ್ಷೇತ್ರದ ಶಾಸಕರು ರೈತರ ಸಮಸ್ಯೆ ಆಲಿಸುತ್ತಿಲ್ಲ. ನೀರಿಗಾಗಿ ಪ್ರತಿವರ್ಷ ಹೋರಾಟ ಮಾಡುವ ಪರಿಸ್ಥಿತಿ ಇದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ರೈತರನ್ನು ಮೂಲೆಗುಂಪು ಮಾಡುತ್ತಿವೆ. ಚಿಮ್ಮಲಗಿ ಏತ ನೀರಾವರಿ ೨೦ ವರ್ಷವಾದರೂ ನೀರು ಹರಿಯುತ್ತಿಲ್ಲ. ೧೫೦೦ ಕೋಟಿ ರೂ.ವೆಚ್ಚದ ಬೂದಿಹಾಳ ಪೀರಾಪೂರ ಯೋಜನೆ ಪೂರ್ಣಗೊಂಡಿಲ್ಲ. ರೈತರೆಲ್ಲರೂ ಹೋರಾಟ ಮಾಡುತ್ತಿದ್ದ ಸಮಯದಲ್ಲಿ ೨೦೦ ಕೋಟಿ ರೂ. ಜುಜಬಿ ಅದನ್ನು ಬಿಡುಗಡೆ ಮಾಡುತ್ತೇವೆಂದು ಹೇಳಿ ೯ ತಿಂಗಳು ಕಳೆಯಲು ಬಂದರೂ ಕಾಮಗಾರಿ ಪ್ರಾರಂಭವಾಗಿಲ್ಲಾ ಹಣ ಕೊಡಿಸಲು ಉಸ್ತುವಾರಿ ಸಚಿವರಿಂದ ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬೆಳೆವಿಮೆಗೆ ಸಂಬಂಧಿಸಿದಂತೆ ವಿಜಯಪುರದ ಉಪ ಕೃಷಿ ನಿರ್ದೇಶಕ ಶರಣಗೌಡ ಆರ್ ರೈತರಿಗೆ ಮಾಹಿತಿ ನೀಡಿದರು.
ಹೋರಾಟಗಾರರ ಪ್ರಶ್ನೆಗಳಿಗೆ ಆಯಾ ಇಲಾಖೆಯ ಅಧಿಕಾರಿಗಳು ಉತ್ತರ ನೀಡಿದರಲ್ಲದೇ ಎಲ್ಲ ಸಮಸ್ಯೆ ಪರಿಹಾರಕ್ಕೆ ಒಂದು ತಿಂಗಳ ಕಾಲಾವಕಾಶ ಕೋರಿದರು.
ಹೋರಾಟದಲ್ಲಿ ರೈತ ಸಂಘದ ವೀರಪ್ಪ ಕುಳೆಕುಮಟಗಿ, ಶಿವಾನಂದಯ್ಯ ಹಿರೇಮಠ, ತಾಲೂಕಾಧ್ಯಕ್ಷ ಶ್ರೀಶೈಲ ವಾಲಿಕಾರ, ದೇವರಾಜ ಗುಂಡಕನಾಳ, ಮಹಿಬೂಬ ಅವಟಿ, ಉಮೇಶ ಮೊಕಾಳೆ, ಶಿವಾರಾಜ ಉಳ್ಳಾಗಡ್ಡಿ, ಮೂಕಿಹಾಳ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ರೈತ ಪ್ರಮುಖರಾದ ಮಲ್ಲಯ್ಯ ಹಿರೇಮಠ, ನಿಂಗಪ್ಪ ಕೆಂಭಾವಿ, ಸಂಗಣ್ಣ ಬಿರಾದಾರ, ಪಟೇಲ್ ಮೂಕಿಹಾಳ, ಬಸವರಾಜ ಪಾಟೀಲ ಬಳವಾಟ, ನಾಗೇಶ, ಶಿವರಾಜ ಗುಗ್ಗಳ್ಳಿ ಮೊದಲಾದವರು ಪಾಲ್ಗೊಂಡಿದ್ದರು.
ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಆಗ್ರಹ
ಪಂಚಾಯಿತಿ ವ್ಯಾಪ್ತಿಯಲ್ಲಿ ಶಿವಪೂರ ಗ್ರಾಮದಲ್ಲಿ ಕಳ್ಳಬಟ್ಟಿ ಸಾರಾಯಿ ಮಾರಾಟದಿಂದ ಹತ್ತು ಜನರು ಅಸುನೀಗಿದ್ದಾರೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಎಲ್ಲೆಂದರಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿರುವ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಸರಕಾರಿ ಗೋಮಾಳ ಜಾಗೆಯ ಅತಿಕ್ರಮಣ ತೆರವುಗೊಳಿಸಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಮನೆಗಳ ಹಂಚಿಕೆ ಪಾರದರ್ಶಕವಾಗಿ ನಡೆಯಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟಗಾರರು ಆಗ್ರಹಿಸಿದರು.
ಅಧಿಕಾರಿಗಳ ತಂಡ ಪ್ರತ್ಯಕ್ಷ
ರೈತರ ಹೋರಾಟ ವೇದಿಕೆಗೆ ತಹಶೀಲ್ದಾರ್ ವಿನಯಾ ಹೂಗಾರ, ತಾಪಂ ಇಒ ಅನಸೂಯಾ ಚಲವಾದಿ, ವಿವಿಧ ಇಲಾಖೆಯ ಅಧಿಕಾರಿಗಳಾದ ಚಂದ್ರಕಾಂತ ಕುಂಬಾರ, ಎಸ್.ಎಸ್.ಕೋಟೆಣ್ಣವರ, ರಮೇಶ ಕೋಲಾರ, ಆರ್.ಎಸ್.ಹಿರೇಗೌಡರ, ಜ್ಞಾನೇಶ ಮುರಾಳ, ಮಹೇಶ ಜೋಷಿ, ವಿಜಯಕುಮಾರ ಬಿರಾದಾರ, ಎಸ್.ಡಿ.ಭಾವಿಕಟ್ಟಿ, ಗಿರೀಶ ಅಲಕುಡೆ, ಲಕ್ಷ್ಣಣ ಸಂಗೋಗಿ ಮೊದಲಾದವರು ಆಗಮಿಸಿ ಹೋರಾಟಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

