ಉದಯರಶ್ಮಿ ದಿನಪತ್ರಿಕೆ
ಇಂಡಿ: ಭಾರತ ಸೇವಾದಳವು ನಿಸ್ವಾರ್ಥ ಸೇವೆಗೆ ಹೆಸರಾಗಿದ್ದು, ದೇಶದ ಅಭಿವದ್ಧಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಅದು ಶಿಸ್ತು, ಸಂಯಮ ಕಲಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಆರ್ ನಡುಗಡ್ಡಿ ಹೇಳಿದರು.
ಬುಧವಾರ ಪಟ್ಟಣದ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ, ತಾಲೂಕ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇಂಡಿ ವತಿಯಿಂದ ಹಮ್ಮಿಕೊಂಡ ‘ತಾಲೂಕ ಮಟ್ಟದ ಪುನಶ್ಚೇತನ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೇವಾದಳದ ಶಿಕ್ಷಕರು ಮಕ್ಕಳಲ್ಲಿ ರಾಷ್ಟ್ರಭಕ್ತಿ, ಶಿಸ್ತು, ದೇಶಪ್ರೇಮ, ಸೇವಾಮನೋಭಾವ ಮತ್ತು ನಾಯಕತ್ವ ಗುಣ ಬೆಳೆಸುವ ಮೂಲಕ ದೇಶವನ್ನು ಅಭಿವೃದ್ದಿ ಪಡಿಸಬೇಕು ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಭಾರತ ಸೇವಾದಳ ಸ್ವಾತಂತ್ರ್ಯ ಹೋರಾಟಗಾರರು,ದೇಶಭಕ್ತರನ್ನು ಹುಟ್ಟು ಹಾಕಿದ ಸಂಸ್ಥೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಾತ್ಮ ಗಾಂಧೀಜಿಯವರಿಗೆ ಸಾತ್ ಕೊಟ್ಟ ಏಕೈಕ ಸಂಸ್ಥೆ. ಜಾತಿ, ಧರ್ಮ, ಭಾಷೆಯ ಭೇದಭಾವವಿಲ್ಲದೆ ಎಲ್ಲರನ್ನು ಒಂದಾಗಿ ಕಾಣುತ್ತಾ, ಭಾವೈಕ್ಯತೆಯನ್ನು ಪ್ರೋತ್ಸಾಹಿಸುವ ಸಂಸ್ಥೆ ಇದಾಗಿದೆ ಎಂದು ಹೇಳಿದರು.
ಜಿಲ್ಲಾ ಸಮಿತಿ ಸದಸ್ಯ ಶ್ರೀಮಂತ ಇಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಪೀಳಿಗೆಯಲ್ಲಿ ದೇಶದ ಬಗ್ಗೆ ಅಪಾರ ಗೌರವ, ದೇಶಭಕ್ತಿ ಮತ್ತು ಐಕ್ಯತಾ ಮನೋಭಾವವನ್ನು ಬೆಳೆಸುವುದು ಈ ಸಂಸ್ಥೆಯ ಮುಖ್ಯ ಗುರಿಯಾಗಿದೆ ಎಂದರು.
ಜಿಲ್ಲಾ ಸಂಘಟಕ ನಾಗೇಶ ಡೋಣುರ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ಸೇವಾದಳಕ್ಕೆ ಶಿಕ್ಷಕರೇ ಅಡಿಗಲ್ಲು. ಶಿಸ್ತುಬದ್ಧ ರಾಷ್ಟ್ರೀಯ ಸೇವೆಗಾಗಿ ತರಬೇತಿ ನೀಡುವುದೇ ಭಾರತ ಸೇವಾದಳದ ಮುಖ್ಯ ಉದ್ದೇಶ ಎಂದು ಹೇಳಿದರು.
ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಬಸವರಾಜ ರಾವೂರ, ತಾಲೂಕ ಪ್ರಧಾನ ಕಾರ್ಯದರ್ಶಿ ಮಹಾದೇವ ಪ್ಯಾಟಿ ಮಾತನಾಡಿದರು.
ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಎಚ್ ಕೆ ಮಾಳಗೊಂಡ, ಬಿ ಆರ್ ಪಿ ಅಧಿಕಾರಿ ಅಶೋಕ ರಾಠೋಡ, ಪ್ರಾಥಮಿಕ ಶಿಕ್ಷಕರ ಸಂಘದ ನಿರ್ದೇಶಕ ಆನಂದ ಕೆಂಭಾವಿ ವೇದಿಕೆಯಲ್ಲಿ ಇದ್ದರು.
ಇದೇ ಸಂದರ್ಭದಲ್ಲಿ ನಿವೃತ್ತರಾದ ಜಿ ಜಿ ಬರಡೋಲ ಅವರನ್ನು ತಾಲೂಕ, ಜಿಲ್ಲಾ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ತಾಲೂಕ ಅಧಿನಾಯಕ ಎಸ್ ಬಿ ಕಲ್ಲೋಳ್ಳಿ ನಿರೂಪಿಸಿದರು. ತಾಲೂಕಿನ ಸೇವಾದಳದ ಶಿಕ್ಷಕ, ಶಿಕ್ಷಕಿಯರು ಪಾಲ್ಗೊಂಡಿದ್ದರು.

