ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಬಿಜೆಪಿ ಮಂಡಲದ ಹಿಂದುಳಿದ ವರ್ಗಗಳ ಕಾರ್ಯಕರ್ತರು ಪಕ್ಷದ ನಿಷ್ಠಾವಂತ ಸದಸ್ಯರಾಗಿದ್ದಾರೆ ಎಂದು ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದು ಬುಳ್ಳಾ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಬುಧವಾರ ಜರುಗಿದ ಬಿಜೆಪಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನಮ್ಮ ಪಕ್ಷ ಅಧಿಕಾರದಲ್ಲಿರಲಿ, ಇಲ್ಲದಿರಲಿ ಹಿಂದುಳಿದ ವರ್ಗಗಳ ಬಹುತೇಕ ಎಲ್ಲ ಕಾರ್ಯಕರ್ತರು ಮಾತ್ರ ಪಕ್ಷಕ್ಕೆ ನಿಷ್ಠರಾಗಿ ಪಕ್ಷ ವಹಿಸಿದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಆದರೆ ಇದನ್ನು ನಾಯಕರು ಅರ್ಥ ಮಾಡಿಕೊಳ್ಳಬೇಕು. ಅಧಿಕಾರವಿದ್ದಾಗ ಲಾಭ ಪಡೆಯುವವರು ಒಬ್ಬರು, ಇಲ್ಲದಿರುವಾಗ ದುಡಿಯುವವರು ಇನ್ನೊಬ್ಬರು ಎನ್ನುವಂತಾಗಬಾರದು. ಏನೇ ಆಗಲಿ ಜಿಲ್ಲೆಯ ಹಾಗೂ ಮತಕ್ಷೇತ್ರದ ನಾಯಕರ ಗಮನಕ್ಕೆ ತಂದು ಪಕ್ಷವನ್ನು ಬಲಪಡಿಸಿ ಅಧಿಕಾರಕ್ಕೆ ತರೋಣ ಎಂದರು.
ಶ್ರೀಮಂತ ತಳವಾರ, ಪ್ರಕಾಶ ದೊಡಮನಿ, ಶರಣು ದಳವಾಯಿ, ಗುರುನಾಥ ಮುರುಡಿ, ಮುತ್ತು ಹಾಲಿಹಾಳ, ಸದ್ದಾಂ ಮಕ್ಕುಬಾಯಿ, ಶಿವರಾಜ ತಳವಾರ, ಪಿಂಟೂ ಭಾಸುತ್ಕರ್, ರಮೇಶ ಈಳಗೇರ ಮಾತನಾಡಿ, ಪಕ್ಷದಲ್ಲಿ ನಾವು ಆಟಕ್ಕೂಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ನಾವು ಪಕ್ಷದ ಕಾರ್ಯಕರ್ತರು. ಇಂದಿನಿಂದಲೇ ಪಕ್ಷಕ್ಕೆ ಬಲ ತುಂಬುವ ಕಾರ್ಯ ಆಗಬೇಕಾಗಿದೆ ಅದಕ್ಕಾಗಿ ನಮ್ಮಂಥ ಹಿಂದುಳಿದ ವರ್ಗಗಳ ಕಾರ್ಯಕರ್ತರ ಅಗತ್ಯತೆ ಇದೆ ಅದಕ್ಕಾಗಿ ಯಾವುದೇ ಕಾರಣಕ್ಕೂ ಕಡೆಗಣನೆ ಬೇಡ ಎಂದು ತಮ್ಮ ಅಸಮಾಧಾನ ಹೊರಹಾಕಿ ಮಂಡಲದ ಅಧ್ಯಕ್ಷರ ಬದಲಾವಣೆಗೆ ಆಗ್ರಹಿಸಿದರು.
ರಾವುತ ಅಗಸರ, ದಾವುದ್ ಇನಾಮದಾರ, ರಾಜು ರಾಠೋಡ, ಜಕ್ಕು ದೊಡ್ಡಣಿ, ಶರಣು ಪೂಜಾರಿ, ಶರಣು ಬಿಜಾಪೂರ, ರಾಜು ಸೊನ್ನಳ್ಳಿ, ಜಗದೀಶ ರಾಠೋಡ, ರೇವಣಸಿದ್ಧ ಮಣ್ಣೂರ, ಬಸವರಾಜ ಕಕ್ಕಳಮೇಲಿ ಧೀರಜ್ ಮಾನೆ ಇದ್ದರು.

