ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ರೂ.3.25 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಪ್ರೌಢಶಾಲೆ ಕಟ್ಟಡ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ (KIAF) ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ಅವರ ಸಿ.ಎಸ್.ಆರ್ ಅನುದಾನದಡಿ ನಿರ್ಮಿಸಲಾದ ಸುಸಜ್ಜಿತ ನೂತನ ಸರಕಾರಿ ಪ್ರೌಢ ಶಾಲಾ ಕಟ್ಟಡದ ಉದ್ಘಾಟನೆ ದಿ.3 ಶುಕ್ರವಾರರಂದು ಬೆ.11ಗಂ. ನಡೆಯಲಿದೆ.
ನೂತನ ಶಾಲಾ ಕಟ್ಟಡವನ್ನು ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರು ಲೋಕಾರ್ಪಣೆಗೊಳಿಸಲಿದ್ದಾರೆ.
ಸಮಾರಂಭದ ಅತಿಥಿಗಳಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಹರಿ ಮರಾರ, ಮುಖ್ಯ ಹಣಕಾಸು ಅಧಿಕಾರಿ ಭಾಸ್ಕರ ಆನಂದರಾವ್, ಅನೀಲಕುಮಾರ ಪಾಟೀಲ ಹಾಗೂ ತಂಡದವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ನೂತನ ಕಟ್ಟಡ ಒಟ್ಟು 3.25 ಕೋಟಿ ವೆಚ್ಚದಲ್ಲಿ 7,000 ಚದರ ಅಡಿ ವಿಸ್ತೀರ್ಣದ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣ ಮತ್ತು 800 ಚದರ ಅಡಿ ಹಳೆಯ ಕಟ್ಟಡದ ಪುನರುಜ್ಜೀವನ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. 1 ರಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ಏಳು ಸುಸಜ್ಜಿತ ತರಗತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ನಾವೀನ್ಯತೆ ಮತ್ತು ಚಟುವಟಿಕೆ ಆಧಾರಿತ ಕಲಿಕೆಗಾಗಿ ‘STEM ಲ್ಯಾಬ್’ ಹಾಗೂ ‘ನಲಿ-ಕಲಿ’ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಶಾಲೆಯಲ್ಲಿ 135 ಹೊಸ ಪೀಠೋಪಕರಣಗಳು, ಬಾಲಕ-ಬಾಲಕಿಯರಿಗೆ 10 ಸುಸಜ್ಜಿತ ಶೌಚಾಲಯ ಮತ್ತು ಸುಸಜ್ಜಿತ ಅಡುಗೆ ಮನೆ ಹಾಗೂ ಊಟದ ಸಭಾಂಗಣವನ್ನು ನಿರ್ಮಿಸಲಾಗಿದೆ.
ಈ ಸುಸಜ್ಜಿತ ಶಾಲಾ ಕಟ್ಟಡವು ಕೋಟ್ಯಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಆಧುನಿಕ ಕಲಿಕಾ ವಾತಾವರಣವನ್ನು ಒದಗಿಸಲಿದೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

