ಉದಯರಶ್ಮಿ ದಿನಪತ್ರಿಕೆ
ದೇವರ ಹಿಪ್ಪರಗಿ: ರಾಮತೇರ ಎಂದೇ ಪ್ರಸಿದ್ಧವಾದ ರಾಮತೀರ್ಥ ಜಾತ್ರೆ ಸಹಸ್ರಾರು ಭಕ್ತವೃಂದದ ನಡುವೆ ಭಕ್ತಿ ಭಾವದೊಂದಿಗೆ ಸಡಗರ, ಸಂಭ್ರಮದಿಂದ ಜರುಗಿತು.
ಪಟ್ಟಣದ ಹತ್ತಿರದಲ್ಲಿರುವ ಐತಿಹಾಸಿಕ ಹಿನ್ನೆಲೆಯ ರಾಮಲಿಂಗೇಶ್ವರ ದೇವಸ್ಥಾನ ಹಾಗೂ ತೀರ್ಥಕುಂಡವಿರುವ ರಾಮತೀರ್ಥ ಕ್ಷೇತ್ರದಲ್ಲಿ ಸಾಂಪ್ರದಾಯಿಕವಾಗಿ ಶ್ರಾವಣ ಮಾಸದ ಮೂರನೇ ಸೋಮವಾರ ಜರುಗಿದ ಜಾತ್ರೆಯ ಅಂಗವಾಗಿ ದೇವರಹಿಪ್ಪರಗಿಯ ಕಲ್ಮೇಶ್ವರ ಹಾಗೂ ಕರಿಸಿದ್ಧೇಶ್ವರರ ಪಲ್ಲಕ್ಕಿಗಳು ಸೇರಿದಂತೆ ಸುತ್ತಮುತ್ತಲಿನ ಒಟ್ಟು ೦೯ ಗ್ರಾಮಗಳ ೨೧ ಕ್ಕೂ ಹೆಚ್ಚಿನ ದೇವರುಗಳ ಪಲ್ಲಕ್ಕಿಗಳು ಡೊಳ್ಳು, ಹಲಿಗೆ, ಕಹಳೆ ಸೇರಿ ವಿವಿಧ ವಾಧ್ಯವೃಂದ ಸಹಿತ ಸಹಸ್ರಾರು ಭಕ್ತರೊಂದಿಗೆ ಆಗಮಿಸಿದವು. ನಂತರ ಕ್ಷೇತ್ರದ ತೀರ್ಥಕುಂಡದಲ್ಲಿ ಗಂಗಾಸ್ನಾನ ಹಾಗೂ ಎಲ್ಲ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ನಂತರ ನೆರೆದ ಭಕ್ತರಿಗೆ ದರ್ಶನ ನೀಡಿದವು. ನಂತರ ಪ್ರಮುಖ ಪೂಜಾರಿಗಳಿಂದ ಭವಿಷ್ಯದ ಕುರಿತಾದ ಹೇಳಿಕೆಗಳು ಹೇಳಲ್ಪಟ್ಟವು.
ಜಾತ್ರೆಯಲ್ಲಿ ಪಡಗಾನೂರಿನ ಕೆಂಚರಾಯ, ಲಗಮವ್ವ, ಶಿವಣಗಿಯ ಮಡ್ಡಿಸಿದ್ಧ, ಅಮೋಘಸಿದ್ಧ, ನಿವಾಳಖೇಡದ ಲಕ್ಷ್ಮಿ, ಕಗ್ಗೋಡದ ತಿಪ್ಪರಾಯ, ಇಂಗಳಗಿಯ ಅಮೋಘಸಿದ್ಧ ಹಾಗೂ ಮುಳಸಾವಳಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ದೇವರ ಪಲ್ಲಕ್ಕಿಗಳು ಸೇರಿದ್ದವು.
ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಬೈಕ್, ಕಾರು, ಟಮ್ ಟಮ್ ಸಹಿತ ವಿವಿಧ ವಾಹನಗಳಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ರಾಮಲಿಂಗೇಶ್ವರನ ಜೊತೆಗೆ ಸೇರಿದ ಎಲ್ಲ ದೇವರ ದರ್ಶನ ಪಡೆದು ನಂತರ ಅನ್ನಪ್ರಸಾದ ಸವಿದು ಸಾಯಂಕಾಲ ಮರಳಿ ಪಲ್ಲಕ್ಕಿಗಳೊಂದಿಗೆ ತಮ್ಮ ಸ್ವಸ್ಥಳಕ್ಕೆ ತೆರಳಿದರು.
ಈ ಬಾರಿ ಜಾತ್ರೆಯ ಅಂಗವಾಗಿ ಧರ್ಮಸಭೆ ಏರ್ಪಡಿಸಲಾಗಿದ್ದು ದೇವರಹಿಪ್ಪರಗಿ ಸದಯ್ಯನಮಠದ ವೀರಗಂಗಾಧರಶ್ರೀಗಳು ಭಾಗವಹಿಸಿ ಆಶೀರ್ವಚನ ನೀಡಿದರು.

