ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣವು ಸಾಂಸ್ಕೃತಿಕ ಮತ್ತು ವ್ಯವಹಾರಿಕವಾಗಿ ಬೆಳವಣಿಗೆಯನ್ನು ಹೊಂದಿದೆ. ಇದುವರೆಗೆ ಪಟ್ಟಣ ಎಂದು ಕರೆಸಿಕೊಂಡ ಸಿಂದಗಿ ಪುರಸಭೆ ನಗರ ಸಭೆಯಾಗಿ ಮಾರ್ಪಾಡಾಗುತ್ತದೆ ಎಂಬ ಸಂತಸದಲ್ಲಿದ್ದ ಜನತೆಗೆ ನಿರಾಶೆ ಮೂಡಿದೆ. ರಾಜ್ಯ ಸರ್ಕಾರ ತಾರತಮ್ಯ ನೀತಿ ಅನುಸರಿಸದೇ ನಗರಾಭಿವೃದ್ಧಿ ಸಚಿವರು ಕೊಟ್ಟ ಮಾತಿನಂತೆ ಸಿಂದಗಿಯನ್ನು ನಗರಸಭೆಯನ್ನಾಗಿ ಸಚಿವ ಸಂಪುಟದಲ್ಲಿ ಅನುಮೋದನೆಯಾಗಬೇಕು ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಕಳೆದ ಮೇ ತಿಂಗಳಲ್ಲಿ ಸಿಂದಗಿ ನಗರಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಆಗಮಿಸಿ ಪತ್ರಿಕಾಗೋಷ್ಠಿ ನಡೆಸಿ ರಾಜ್ಯದಲ್ಲಿರುವ ಪುರಸಭೆಗಳನ್ನು ನಗರಸಭೆಗಳನ್ನಾಗಿ ಮೇಲ್ದರ್ಜೆಗೇರಿಸುವ ಸಮಯ ಬಂದರೆ ಸಿಂದಗಿ ನಗರಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು ಎಂದು ಹೇಳಿಕೆ ನೀಡಿದ್ದರು. ಆದರೆ ಅವರ ನೀಡಿದ ಭರವಸೆ ಹುಸಿಯಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಹೀಗಾಗಿ ಸಿಂದಗಿ ನಗರ ಸಭೆಯಾಗುವ ಕನಸು ನನಸಾಗಿಯೇ ಉಳಿಯುತ್ತದೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೇರದಿರುವುದು ತಾಲೂಕಿನ ಜನತೆಯಲ್ಲಿ ಅಸಮಾಧಾನ ಉಂಟಾಗಿದೆ ಎಂದು ವಿಷಾಧಿಸಿದ್ದಾರೆ.

