ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಜನರ ಸರ್ಕಾರ ಎಂಬ ಮಾತು ಸುಳ್ಳಾಗಿದೆ. ಅಧಿಕಾರಿಗಳು ಮನಸ್ಸು ಮಾಡಿದರೆ ಮಾತ್ರ ಕೆಲಸಗಳಾಗುತ್ತದೆ. ಏನೇ ಅಭಿವೃದ್ಧಿ ಕೆಲಸಗಳಾಗಲಿ ವೈಯಕ್ತಿಕ ಕೆಲಸಗಳಾಗಬೇಕಾದರೆ ಅಧಿಕಾರಿಗಳು ಮನಸ್ಸು ಮಾಡಬೇಕು. ಗ್ರಾಮಗಳ ಅಭಿವೃದ್ಧಿಗೆ ಪಿಡಿಒಗಳು ಮನಸ್ಸು ಮಾಡಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಮಹತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನೂತನವಾಗಿ ನಿರ್ಮಿಸಿದ ಗ್ರಾಮ ಪಂಚಾಯ್ತಿ ಕಟ್ಟಡ ರಾಜೀವ ಗಾಂಧಿ ಸೇವಾ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಅಧಿಕಾರಿ ಸಾರ್ವಜನಿಕರ ಸೇವೆಗಾಗಿ ಬಂದಿದ್ದೇವೆ ಎಂಬುದನ್ನು ಮರೆಯಬಾರದು. ಸಾರ್ವಜನಿಕರು ಕಟ್ಟುವ ಟ್ಯಾಕ್ಸನಿಂದ ನಾವೆಲ್ಲ ಸಂಬಳ ಪಡೆಯುತ್ತೇವೆ. ಆದ್ದರಿಂದ ಸಾರ್ವಜನಿಕರ ಸೇವೆ ಮಾಡಬೇಕು ಎಂದು ತಿಳಿಹೇಳಿದರು.
ವಿಪ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಉತ್ತಮ ಶಿಕ್ಷಣದ ವ್ಯವಸ್ಥೆ, ಸ್ವಚ್ಛ ಗ್ರಾಮ, ರೈತರಿಗೆ ಹಣಕಾಸು ಒದಗಿಸುವ ಸಂಸ್ಥೆಗಳು ಉತ್ತಮವಾಗಿ ಕಾರ್ಯ ನಿರ್ವ ಹಿಸಿದರೆ ಗ್ರಾಮದ ಅಭಿವೃದ್ಧಿಯಾಗುತ್ತದೆ. ಗ್ರಾಮ ಸ್ವರಾಜ್ಯದ ಕನಸು ಕಂಡಿದ್ದ ಮಹತ್ಮಾಗಾಂಧಿ ಅವರ ಕನಸು ನನಸು ಮಾಡಲು ಗ್ರಾಪಂ ಆಡಳಿತ ಶ್ರಮಿಸಬೇಕು. ಗ್ರಾಪಂಗಳು ಗ್ರಾಮಕ್ಕೆ ಕುಡಿವ ನೀರು, ಬೀದಿ ದೀಪ ಹಾಗೂ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಗ್ರಾಮಗಳರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಗ್ರಾಮಗಳ ಅಭಿವೃದ್ಧಿಯಾದರೆ ದೇಶವೇ ಅಭಿವೃದ್ಧಿ ಹೊಂದುತ್ತದೆ ಎಂದು ಅಭಿಪ್ರಾಯಪಟ್ಟರು.
ಕುಂಚನೂರಿನ ಮಾದುಗೊಂಡ ಮಹಾರಾಜರು, ಸಾನ್ನಿಧ್ಯ ವಹಿಸಿದ್ದ ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಸ್ವಾಮಿಗಳು ಆಶೀರ್ವಚನ ನೀಡಿಕುಂಬಾರಹಳ್ಳ ಗ್ರಾಮವನ್ನು ಸ್ವಚ್ಛಗ್ರಾಮವನ್ನಾಗಿ ದೇಶದಲ್ಲೇ ಮಾದರಿ ಗ್ರಾಮವನ್ನಾಗಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಹೇಳಿದರು.
ಓಲೇಮಠದ ಆನಂದ ದೇವರು, ಸದಾಶಿವ ಚಂದ್ರಗಿರಿಮಠದ ಸಂಗಯ್ಯ ಮಠಪತಿ, ಮುಖಂಡರಾದ ದಾವಲ ದೇಸಾಯಿ, ಗ್ರಾಪಂ ಅಧ್ಯಕ್ಷೆ ಸತ್ಯವ್ವ ನಾಟೀಕಾರ, ಉಪಾಧ್ಯಕ್ಷ ಶ್ರೀಶೈಲ ಮಂಟೂರ, ತಾಪಂ ಸಿಇಓ ಸಚೀನ ಮಾಚಕನೂರ, ಯೋಜನಾಧಿಕಾರಿ ಗಿರೀಶ ಕಡಕೋಳ, ಗ್ರಾಪಂನ ಸರ್ವ ಸದಸ್ಯರು ವೇದಿಕೆಯಲ್ಲಿದ್ದರು. ಪಿಡಿಓ ಸೈಯ್ಯದ ಇರ್ಫಾನ ಸಾರವಾನ, ಕಾರ್ಯದರ್ಶಿ ರತ್ನವ್ವ ಸಜ್ಜನ, ಸಹಾಯಕ ನಿಂಗರಾಜ ಬಾಗಾದಿ, ಸನಾಳ ಮತ್ತು ಕುಂಬಾರಹಳ್ಳದ ಗ್ರಾಮಸ್ಥರು ಕಾರ್ಯಕ್ರಮ,ದಲ್ಲಿ ಭಾಗವಹಿಸಿದ್ದರು.

