ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನಲ್ಲಿ ಆಯ್ಕೆಯಾದ ಬೆಳೆ ಸಮೀಕ್ಷೆಗಾರರು ಬೆಳೆ ಸಮೀಕ್ಷೆ ಮಾಡುವಾಗ ಬರುವ ನ್ಯೂನತೆಗಳನ್ನು ಸರಿಪಡಿಸಿಕೊಂಡು ನಿಖರವಾದ ಬೆಳೆ ಸಮೀಕ್ಷೆಯನ್ನು ಕೈಗೊಳ್ಳಬೇಕೆಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್.ಯರಝರಿ ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ೨೦೨೫-೨೬ ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗಾಗಿ ಆಯ್ಕೆಯಾದ ಖಾಸಗಿ ನಿವಾಸಿಗಳಿಗೆ (ಬೆಳೆ ಸಮೀಕ್ಷೆಗಾರರು) ಹಮ್ಮಿಕೊಂಡಿದ್ದ ಒಂದು ದಿನದ ಬೆಳೆ ಸಮೀಕ್ಷೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮೀಕ್ಷೆಗಾರರು ರೇಷ್ಮೆ ಬೆಳೆಗಳನ್ನು ಸೇರಿದಂತೆ ತಾಲೂಕಿನ ಯಾವುದೇ ರೈತರ ಜಮೀನುಗಳು ಕೈ ತಪ್ಪದಂತೆ ಸಮೀಕ್ಷೆ ಮಾಡಬೇಕು. ಬೆಳೆ ಸಮೀಕ್ಷೆಯಿಂದ ಸಂಗ್ರಹಿಸಿದ ದತ್ತಾಂಶಗಳನ್ನು ಸರ್ಕಾರದ ವಿವಿಧ ಯೋಜನೆಗಳಲ್ಲಿ ಕನಿಷ್ಠ ಬೆಂಬಲ, ಸಬ್ಸಿಡಿ ಪಾವತಿ, ಬೆಳೆ ಪ್ರದೇಶದ ಅಂದಾಜು ಕೃಷಿ ಮತ್ತು ತೋಟಗಾರಿಕ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳ ಆಯ್ಕೆಗೆ ಮುಂತಾದ ಸೌಲಭ್ಯ ಒದಗಿಸಲು ಬಳಕೆಯಾಗುತ್ತದೆ. ಬೆಳೆ ಸಮೀಕ್ಷೆಗಾರರು ಪ್ರಾಮಾಣಿಕವಾಗಿ, ನಿಖರವಾಗಿ ಮಾಡಬೇಕೆಂದು ಸೂಚಿಸಿದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿ, ಎಲ್ಲ ಖಾಸಗಿ ನಿವಾಸಿಗಳು ತಮಗೆ ಆಯ್ಕೆಯಾದ ಗ್ರಾಮಗಳಲ್ಲಿ ರೈತರಿಗೆ ಜಾಗೃತಿ ಮೂಡಿಸಿ ಯಾವುದೇ ಬೆಳೆಗಳು ಹಾಗೂ ಜಮೀನುಗಳು ಸಮೀಕ್ಷೆಯಿಂದ ಹೊರಗುಳಿಯದಂತೆ ಸಮೀಕ್ಷೆಯನ್ನು ಪರಿಪೂರ್ಣವಾಗಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕೆಂದರು.
ತರಬೇತಿಯಲ್ಲಿ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದ ಕೃಷಿ ಅಧಿಕಾರಿ ಲಿಂಗರಾಜ ತಾಳಿಕೋಟಿ, ಜಿಲ್ಲಾ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಅಧಿಕಾರಿ ಪರಮೇಶ ಕೆಂಚಣ್ಣನವರ ಅವರು ಆಯ್ಕೆಯಾದ ೫೦ ಸಮೀಕ್ಷೆಗಾರರಿಗೆ ಬೆಳೆ ಸಮೀಕ್ಷೆ ಕುರಿತಂತೆ ತರಬೇತಿ ನೀಡಿದರು.
ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿಗಳಾದ ಚಿದಾನಂದ ಹಿರೇಮಠ, ಭೀಮಾಶಂಕರ ಕುಂಬಾರ, ಶಹನವಾಸ ಖಾದ್ರಿ, ಕಂದಾಯ ಇಲಾಖೆಯ ಅಧಿಕಾರಿಗಳಾದ ಸಿದ್ದಣ್ಣ ಶಿರಶ್ಯಾಡ, ಸಂತೋಷ ಕುಂಟೋಜಿ, ಬಿ.ಬಿ.ಕಾಮತ, ಎಲ್ಲ ಗ್ರಾಮದ ಗ್ರಾಮಾಡಳಿತಾಧಿಕಾರಿಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

