ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಆಲಮಟ್ಟಿಯ ರಾಕ್ ಉದ್ಯಾನದಲ್ಲಿ ಒಂದು, ಪಾರ್ಕಿಂಗ್ ಲಾಟ್ ಬಳಿ ಒಂದು ಸೇರಿ ಒಟ್ಟಾರೇ ಎರಡು ಶ್ರೀಗಂಧ ಗಿಡಗಳನ್ನು ಕತ್ತರಿಸಿ ಕಳ್ಳತನ ಮಾಡಿದ ಘಟನೆ ಬುಧವಾರ ರಾತ್ರಿ ಜರುಗಿದೆ.
ಎರಡು ಮರಗಳನ್ನು ಕತ್ತರಿಸಿ, ಅವುಗಳನ್ನು ಒಯ್ಯಲು ಸಾಧ್ಯವಾಗದೇ ಅಲ್ಲಿಯೇ ಎಸೆದು ಕಳ್ಳರು ಪಾರಾಗಿದ್ದಾರೆ.
ಎರಡು ಗಿಡಗಳು ಅಂದಾಜು ೧೦ ವರ್ಷ ವಯಸ್ಸಿನದ್ದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಉಪ ವಲಯ ಅರಣ್ಯಾಧಿಕಾರಿ ಸತೀಶ ಗಲಗಲಿ, ಘಟನೆಯ ಕುರಿತು ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಲಮಟ್ಟಿ ಜಲಾಶಯ ಭದ್ರತೆಗೆಂದು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ನಿಯೋಜಿಸಲಾಗಿದೆ. ಜತೆಗೆ ಪೆuಟಿಜeಜಿiಟಿeಜಲೀಸ್ ಇಲಾಖೆ ಕೂಡ ಶ್ರಮ ವಹಿಸುತ್ತಿದೆ. ಇಷ್ಟೊಂದು ಭದ್ರತೆ ನಡುವೆಯೂ ಆಗಾಗ ಶ್ರೀಗಂಧದ ಮರಗಳು ಕಳ್ಳತನವಾಗುತ್ತಿರುವುದು ಮಾತ್ರ ಭದ್ರತೆಯ ಲೋಪ ಎತ್ತಿ ತೋರಿಸುತ್ತಿದೆ.
ಆಲಮಟ್ಟಿಯ ನಾನಾ ಅಧಿಕಾರಿ ಕಚೇರಿ ಹಾಗೂ ಆಕರ್ಷಕ ಉದ್ಯಾನಗಳಲ್ಲಿ ಶ್ರೀಗಂಧದ ಮರಗಳನ್ನು ಬೆಳೆಸಲಾಗಿದೆ. ಕೆಲ ಮರಗಳು ಬೃಹದಾಕಾರವಾಗಿ ಬೆಳೆದಿದ್ದು, ಲಕ್ಷಾಂತರ ರೂ.ಗಳ ಮೌಲ್ಯ ಹೊಂದಿವೆ. ಇದು ಮರಗಳ್ಳರ ಪಾಲಿಗೆ ವರವಾಗಿದ್ದು, ಆಗಾಗ ಇಲ್ಲಿನ ಶ್ರೀಗಂಧದ ಮರಗಳನ್ನು ಕಡಿದುಕೊಂಡು ಲಕ್ಷಾಂತರ ರೂ. ಗಳ ಆದಾಯ ಗಳಿಸುತ್ತಿದ್ದಾರೆ.
ಕಳೆದ ಐದಾರು ವರ್ಷಗಳಲ್ಲಿ ವರ್ಷಕ್ಕೆ ೨ ಬಾರಿಯಾದರೂ ಇಲ್ಲಿ ಶ್ರೀಗಂಧದ ಮರಗಳ ಕಳ್ಳತನ ಪ್ರಕರಣಗಳಾಗಿವೆ. ಆದರೆ ಇದುವರೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಸಂಬಂಧಿತ ಅಧಿಕಾರಿಗಳು ಮುಂದಾಗಿಲ್ಲ. ಪ್ರತಿ ಬಾರಿ ಈ ಘಟನೆ ಸಂಭವಿಸಿದಾಗ ಹಿರಿಯ ಅಧಿಕಾರಿಗಳು, ಕಿರಿಯ ಅಧಿಕಾರಿಗಳಿಗೆ ಎಚ್ಚರಿಸಿ ಹೋಗುತ್ತಾರೆಯೇ ಹೊರತು ಯಾವುದೇ ಕ್ರಮವಾಗಿಲ್ಲ. ಇದರಿಂದ ಮರಗಳ್ಳರು ಮತ್ತು ಅಧಿಕಾರಿಗಳ ಮಧ್ಯ ಒಡಂಬಡಿಕೆ ಇರಬಹುದು ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

