ಸಾತಿಹಾಳ ಗ್ರಾಮದ ಡೋಣಿ ನದಿಯ ಸೇತುವೆ ಮೇಲಿನ ಸಂಪರ್ಕ ನಿಷೇಧಿಸಿದ ಗ್ರಾಮಸ್ಥರು
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಬಸವನಬಾಗೇವಾಡಿ-ಮುದ್ದೇಬಿಹಾಳ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಸಾತಿಹಾಳ ಗ್ರಾಮದ ಹತ್ತಿರದಲ್ಲಿರುವ ಡೋಣಿ ನದಿಯ ಸೇತುವೆ ಗುರುವಾರ ಪ್ರವಾಹಕ್ಕೆ ಒಳಗಾಗಿ ಮುಳುಗಿದ್ದು ಸುಮಾರು ೪ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.
ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಡೋಣಿ ನದಿ ಗುರುವಾರ ತುಂಬಿ ಹರಿಯುತ್ತಿದ್ದು, ಸಾತಿಹಾಳ ಸೇತುವೆ ನೀರಿನಿಂದ ಆವೃತ್ತವಾಗಿ ಮುಳುಗಿತು. ಬೆಳಿಗ್ಗೆ ಸಾರಿಗೆ ಬಸ್ ಸೇರಿದಂತೆ ಭಾರಿ ವಾಹನಗಳು ಮಾತ್ರ ಪ್ರವಾಹದ ನೀರಿನಲ್ಲಿಯೇ ಸಂಚರಿಸಿದವು. ಆದರೆ ಮಧ್ಯಾನ ೧೨.೩೦ ಗಂಟೆಯ ನಂತರ ಪ್ರವಾಹದ ಮಟ್ಟ ಹೆಚ್ಚಾಗಿ ಯಾವುದೇ ವಾಹನಗಳಿಗೆ ಆಸ್ಪದವಿಲ್ಲದಂತಾಯಿತು. ಇದರಿಂದ ಸಂಚಾರ ಸ್ತಬ್ಧಗೊಂಡು ಅಸ್ತವ್ಯಸ್ತವಾಯಿತು. ಸಾಯಂಕಾಲ ೪ ಗಂಟೆಯವರೆಗೆ ಪ್ರವಾಹದ ಮಟ್ಟ ಹೆಚ್ಚಾಗಿಯೇ ಇದ್ದು ಎರಡು ಕಡೆ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು.
ಸೇತುವೆ ಮೇಲೆ ಪ್ರವಾಹ ಹೆಚ್ಚಾಗುತ್ತಿದ್ದಂತೆಯೇ ಮಾರ್ಕಬ್ಬಿನಹಳ್ಳಿ ಕ್ರಾಸ್ ಹತ್ತಿರ ದೇವರಹಿಪ್ಪರಗಿ ತಹಶೀಲ್ದಾರ ಪ್ರಕಾಶ ಸಿಂದಗಿ ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ, ಕಂದಾಯ ನಿರೀಕ್ಷಕ ಶಿವಶಂಕರ ಜಾಧವ, ಸಾತಿಹಾಳ ಗ್ರಾಮ ಆಡಳಿತಾಧಿಕಾರಿ ಮಹಾದೇವಿ ಅಳ್ಳೋಳ್ಳಿ ಇವರು ರಸ್ತೆಯನ್ನು ಬಂದ್ ಮಾಡಿ ಸಾತಿಹಾಳ ಗ್ರಾಮದೆಡೆಗೆ ಯಾರು ಪ್ರವೇಶಿಸದಂತೆ ಆದೇಶಿಸಿದರು. ಅತ್ತ ಸಾತಿಹಾಳ ಗ್ರಾಮದ ಯುವಕರಾದ ಬಾಬು ಬನ್ನಟ್ಟಿ, ಮಂಜುನಾಥ ಹೊಸಮನಿ, ಸಿದ್ರಾಮಯ್ಯ ಮಠ, ವಸಂತ ಬಾಗೇವಾಡಿ, ಗಂಗಾರಾಮ ಪವಾರ ಇವರು ತಾಲ್ಲೂಕು ಆಡಳಿತ ಸಿಬ್ಬಂದಿ ಅನೀಲ ರಾಠೋಡ ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಸೇರಿ ಮುಳ್ಳು ಕಂಟಿ ಅಳವಡಿಸಿ ಸಾರ್ವಜನಿಕರು ದೇವರಹಿಪ್ಪರಗಿ ಕಡೆಗೆ ಪ್ರವೇಶಿಸಿದಂತೆ ಕ್ರಮ ವಹಿಸಿದರು. ಸಾಯಂಕಾಲ ಡೋಣಿ ಪ್ರವಾಹ ಇಳಿಯುತ್ತಿದ್ದಂತೆಯೇ ಸಾರ್ವಜನಿಕರಿಗೆ ರಸ್ತೆ ಹಾಗೂ ಸೇತುವೆ ಮುಕ್ತಗೊಳಿಸಲಾಯಿತು.

