ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಲ್ಲಿನ ಐಶ್ವರ್ಯ ನಗರದ ಭಾಗ್ಯಶ್ರೀ ಡೊಣಗಿ ರಾಜ್ಯ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಇವರು ಕೊಡಮಾಡುವ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರಕ್ಕೆ ನಗರದ ಎಕ್ಸಲೆಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ಪ್ರತಿಭಾವಂತ ವಿದ್ಯಾರ್ಥಿನಿ ಭಾಗ್ಯಶ್ರೀ ಡೊಣಗಿ ಆಯ್ಕೆಯಾಗಿದ್ದು ಶ್ಲಾಘನೀಯ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ ೯೪.೪ ಅಂಕ ಪಡೆದ ಭಾಗ್ಯಶ್ರೀ ಉತ್ತಮ ಸಾಧನೆ ಮಾಡಿದ್ದು ಈ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದಾರೆ.
ಬಾಗಲಕೋಟೆ ನವನಗರದ ಕಲಾಭವನದಲ್ಲಿ ಜರುಗುವ ಸಮಾರಂಭವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ವೆಂಕಪ್ಪ ಸುಗತೇಕರ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆ ರಾಜ್ಯಧ್ಯಕ್ಷ ಸಿ ಎಸ್ ಷಡಾಕ್ಷರಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ, ಜಿ ಪಂ ಸಿ ಇ ಓ ಶಶಿಧರ ಕುರೇರ, ಜಿಲ್ಲಾ ಎಸ್ ಪಿ ಸಿದ್ಧಾರ್ಥ ಗೋಯಲ್ ಆಗಮಿಸಲಿದ್ದಾರೆ.
ಸಸ್ಯ ಅಧ್ಯಯನ, ಚಿತ್ರಕಲೆ, ಯೋಗ, ಭಾಷಣ, ಕ್ವಿಜ್ ನಲ್ಲಿ ಪ್ರಶಸ್ತಿ ಪಡೆದ ಭಾಗ್ಯಶ್ರೀ ಕೊರೋನಾ ಅರಿವು ಮೂಡಿಸುವಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರು ಸೇರ್ಪಡೆ ಮಾಡಿದ್ದು ವಿಶೇಷ. ಚಿತ್ರಕಲೆ ಸಾಧನೆಗೆ ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಆಫ್ ಕರ್ನಾಟಕ ಅವಾರ್ಡ್ ಪಡೆದು ಮ್ಯಾಜಿಕ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ಸೇರಿದೆ. ಅಲ್ಲದೆ ಇಂಡಿಯಾ ಸ್ಟಾರ್ ರಿಪಬ್ಲಿಕ್ ಅವಾರ್ಡ್ ಪಡೆದು ಇಂಡಿಯಾ ಸ್ಟಾರ್ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ. ಉದ್ದ ಆರೋಗ್ಯಕರ ಕೂದಲಿನ ಸಾಧನೆಗೆ ಗ್ರ‍್ಯಾಂಡ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಿದ್ದು ಎಲ್ಲರೂ ಮೆಚ್ಚುವಂತಹದು.
ಭಾಗ್ಯಶ್ರೀ ಸಾಧನೆಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಎಕ್ಸಲೆಂಟ್ ಸಮೂಹ ಸಂಸ್ಥೆಯ ವಿಜ್ಞಾನ ಕಾಲೇಜು ಮುಖ್ಯಸ್ಥ ಬಸವರಾಜ ಕೌಲಗಿ, ನೌಕರರ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ, ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾದ್ಯಕ್ಷ ಅರ್ಜುನ ಲಮಾಣಿ, ಸೇರಿದಂತೆ ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ.

